ಮುಂಬೈಗೆ ಅಪ್ಪಳಿಸಲಿದೆ 'ನಿಸರ್ಗ'; ಕರ್ನಾಟಕದಲ್ಲೂ ಮಳೆ
ಮುಂಬೈ, ಜೂನ್ 03 : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ 'ನಿಸರ್ಗ' ಚಂಡಮಾರುತ ಮಹಾರಾಷ್ಟ್ರಕ್ಕೆ ಇಂದು ಅಪ್ಪಳಿಸಲಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿಯೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
Recommended Video
ಮುಂಬೈನಿಂದ 94 ಕಿ. ಮೀ. ದೂರದಲ್ಲಿರುವ ಅಲಿಬಾಗ್ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಬೈ, ಪಾಲ್ಘರ್, ರಾಯಗಢ, ಥಾಣೆ, ರತ್ನಗಿರಿ, ಸಿಂಧುದುರ್ಗ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 110 ರಿಂದ 120 ಕಿ. ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಗುಜರಾತ್, ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. 100 ಕಿ. ಮೀ.ಗಿಂತಲೂ ಅಧಿಕ ವೇಗದಲ್ಲಿ ಗಾಳಿ ಬೀಸಲಿದ್ದು, ಜೂನ್ 4ರ ತನಕ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ಕೊಡಲಾಗಿದೆ.

ದಿಕ್ಕು ಬದಲಿಸಿದ 'ನಿಸರ್ಗ'
ಮಂಗಳವಾರ ಮಧ್ಯಾಹ್ನ ಮುಂಬೈನಿಂದ ದಕ್ಷಿಣಕ್ಕೆ 430 ಕಿ. ಮೀ. ದೂರದಲ್ಲಿ ಚಂಡಮಾರುತದ ಕೇಂದ್ರ ಬಿಂದುವಿತ್ತು. ಆದ್ದರಿಂದ ನೇರವಾಗಿ ಮುಂಬೈಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಚಂಡಮಾರುತ ದಿಕ್ಕು ಬದಲಿಸಿದ್ದು, ಅಲಿಭಾಗ್ ಪ್ರದೇಶಕ್ಕೆ ಅಪ್ಪಳಿಸಲಿದೆ.

ಯಾವ-ಯಾವ ರಾಜ್ಯದಲ್ಲಿ ಮಳೆ
'ನಿಸರ್ಗ' ಚಂಡಮಾರುತ ಉತ್ತರ ಮಹಾರಾಷ್ಟ್ರ, ಆಗ್ನೇಯ ಗುಜರಾತ್ ಮಧ್ಯಭಾಗದಲ್ಲಿ ಹಾದು ಹೋಗಲಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿಯೂ ಚಂಡಮಾರುತದ ಪರಿಣಾಮ ಕರಾವಳಿ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

30 ಎನ್‌ಡಿಆರ್‌ಎಫ್ ತಂಡ ರವಾನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. 30 ಎನ್‌ಡಿಆರ್‌ಎಫ್ ತಂಡಗಳನ್ನು ಎರಡೂ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಮುಂಬೈನ ತಗ್ಗು ಪ್ರದೇಶ ಮತ್ತು ಕೊಳಗೇರಿಯ ಜನರನ್ನು ಸ್ಥಳಾಂತರ ಮಾಡಲಾಗಿದೆ. ಸೇನೆಗೂ ಸನ್ನದ್ಧವಾಗಿ ಇರುವಂತೆ ಸೂಚನೆ ಕೊಡಲಾಗಿದೆ.

ಕರ್ನಾಟಕದ ಮೇಲೆ ಪ್ರಭಾವ
'ನಿಸರ್ಗ' ಚಂಡಮಾರುತದ ಪರಿಣಾಮದಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆಯ ಮುನ್ಸೂಚನೆ ಕೊಡಲಾಗಿದೆ.












Click it and Unblock the Notifications