ಅಪ್ಪಳಿಸಿದ 'ನಿಸರ್ಗ' ಚಂಡಮಾರುತ ; ಮುಂಬೈ ವಿಮಾನ ನಿಲ್ದಾಣ ಬಂದ್
ಮುಂಬೈ, ಜೂನ್ 03 : 'ನಿಸರ್ಗ' ಚಂಡಮಾರುತ ಮಹಾರಾಷ್ಟ್ರಕ್ಕೆ ಅಪ್ಪಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಮುಂಬೈ ವಿಮಾನ ನಿಲ್ದಾಣದಿಂದ ಸಂಜೆಯ ತನಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ 'ನಿಸರ್ಗ' ಚಂಡಮಾರುತ ಬುಧವಾರ ಮಧ್ಯಾಹ್ನದ ವೇಳೆಗೆ ಅಲಿಬಾಗ್ ಪ್ರದೇಶಕ್ಕೆ ಅಪ್ಪಳಿಸಲಿದೆ. ಇದರಿಂದಾಗಿ ಮುಂಬೈ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಮಳೆಯಾಗುತ್ತಿದೆ.
ಚಂಡಮಾರುತ ಅಪ್ಪಳಿಸಿದ ಪರಿಣಾಮ ಮುಂಬೈ ವಿಮಾನ ನಿಲ್ದಾಣದಿಂದ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ 7 ಗಂಟೆ ಬಳಿಕ ವಿಮಾನ ಹಾರಾಟವನ್ನು ಪುನಃ ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಮೇ 25ರಿಂದ ದೇಶಿಯ ವಿಮಾನಗಳ ಸಂಚಾರ ಮಾತ್ರ ಆರಂಭವಾಗಿದೆ.
ಮುಂಬೈನಲ್ಲಿ ಚಂಡಮಾರುತದ ಪ್ರಭಾವ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನದಿಂದಲೇ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಗಾಳಿ ಜೋರಾಗಿ ಬೀಸುತ್ತಿದೆ. ನಗರದ ಸಮುದ್ರ ತೀರ, ಕಳೆ ಪ್ರದೇಶದಲ್ಲಿದ್ದ 40 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ.












Click it and Unblock the Notifications