ಮುಂಬೈ; ಜೂನ್ 25ರಂದು ನೂಪುರ್ ಶರ್ಮಾ ಹೇಳಿಕೆ ದಾಖಲು
ಮುಂಬೈ, ಜೂನ್ 12; ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ನಾಯಕಿ ನೂಪುರ್ ಶರ್ಮಾ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಬರುವಂತೆ ಪೊಲೀಸರು ಸಮನ್ಸ್ ನೀಡಿದ್ದಾರೆ.
ಮುಂಬೈ ನಗರದ ಪೈಡೋನಿ ಪೊಲೀಸ್ ಠಾಣೆಯಲ್ಲಿ ನೂಪುರ್ ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ. ಜೂನ್ 25ರಂದು ಅವರ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಳ್ಳಲಿದ್ದಾರೆ. ಅಂಚೆ ಮೂಲಕ ಅವರಿಗೆ ಸಮನ್ಸ್ ನೀಡಲಾಗಿದ್ದು, ವಿಚಾರಣೆಗೆ ಆಗಮಿಸುವಂತೆ ಸೂಚನೆ ಕೊಡಲಾಗಿದೆ.
ಮೇ 29ರಂದು ರಜಾ ಅಕಾಡೆಮಿ ಮುಂಬೈ ವಿಭಾಗದ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಪೈಡೋನಿ ಪೊಲೀಸ್ ಠಾಣೆಗೆ ನೂಪುರ್ ಶರ್ಮಾ ವಿರುದ್ಧ ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ, ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಯಲ್ಲಿ ನೂಪುರ್ ಶರ್ಮಾ ವಿರುದ್ಧ ದೂರು ದಾಖಲಾಗಿದೆ. ಭಿವಾಂಡಿ ಪೊಲೀಸರು ಸಹ ಅವರಿಗೆ ಸಮನ್ಸ್ ನೀಡಿದ್ದಾರೆ. ಭೋಯಿವಾಡ ಪೊಲೀಸರು ಸಹ ಸಮನ್ಸ್ ನೀಡಿದ್ದು, ನೂಪುರ್ ಶರ್ಮಾ ಹಾಜರಾಗುವ ದಿನಾಂಕ ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ. ಮುಂಗ್ರಾ ಠಾಣೆ ಜೂನ್ 22ರಂದು ಹಾಜರಾಗುವಂತೆ ಸಮನ್ಸ್ ನೀಡಿದೆ.
ಬಿಜೆಪಿಯಿಂದ ಅಮಾನತು; ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ವಾರಣಾಸಿ ಜ್ಞಾನವಾಪಿ ಮಸೀದಿ ಕುರಿತ ಕಾರ್ಯಕ್ರಮದ ಚರ್ಚೆಯಲ್ಲಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಪಾಲ್ಗೊಂಡಿದ್ದರು. ಆಗ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬುದು ಆರೋಪ.
ಈ ಹೇಳಿಕೆ ವಿವಾಕ್ಕೆ ಕಾರಣವಾಗಿದೆ. ಅರಬ್ ರಾಷ್ಟ್ರಗಳು ಭಾರತದ ಆಡಳಿತ ಪಕ್ಷದ ವಕ್ತಾರೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ನೂಪುರ್ ಶರ್ಮಾರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಸೌದಿ ಅರೇಬಿಯಾ, ಬಹ್ರೇನ್, ಅರಬ್ ಸಂಯುಕ್ತ ಸಂಸ್ಥಾನ, ಇಂಡೊನೇಷ್ಯಾ, ಜೋರ್ಡನ್ ಸೇರಿದಂತೆ ವಿವಿಧ ರಾಷ್ಟ್ರಗಳು ನೂಪುರ್ ಶರ್ಮಾ ಹೇಳಿಕೆಗೆ ವಿರೋಧಿ ವ್ಯಕ್ತಪಡಿಸಿದ್ದವು. ಈ ಹೇಳಿಕೆ ಬಳಿಕ ನೂಪುರ್ ಶರ್ಮಾ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದೂರು ದಾಖಲಾಗಿದೆ.
ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದಾರೆ. ಆದರೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಶುಕ್ರವಾರದ ಪ್ರಾರ್ಥನೆ ಬಳಿಕ ನೂಪುರ್ ಶರ್ಮಾ ಬಂಧಿಸಬೇಕು ಎಂದು ಆಗ್ರಹಿಸಿ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆದು, ಹಿಂಸಾಚಾರ ಸಹ ನಡೆದಿದೆ.
ನೂಪುರ್ ಶರ್ಮಾ ಪೊಲೀಸ್ ಠಾಣೆಗೆ ಭೇಟಿ ನೀಡುವಾಗ ಅವರ ಮೇಲೆ ದಾಳಿ ನಡೆಯುವ ಸಾಧ್ಯತೆಯೂ ಇದೆ. ಇದರಿಂದಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಳ್ಳಬೇಕಿದೆ.
ಕಾಶ್ಮೀರದ ಯೂಟ್ಯೂಬರ್ ಫೈಸಲ್ ವಾನಿ ನೂಪುರ್ ಶರ್ಮಾ ಶಿರಚ್ಛೇಧ ಮಾಡಿದ ಪ್ರತಿಕೃತಿ ವಿಡಿಯೋ ಪ್ರದರ್ಶನ ಮಾಡಿದ್ದ. ಬಳಿಕ ಪೊಲೀಸರು ಫೈಸಲ್ ವಾನಿ ಬಂಧಿಸಿದ್ದರು. ಬಳಿಕ ಆತ ತನ್ನ ವಿಡಿಯೋ ಡಿಲೀಟ್ ಮಾಡಿ ಜನರ ಕ್ಷಮೆ ಕೇಳಿದ್ದ.
37 ವರ್ಷದ ನೂಪುರ್ ಶರ್ಮಾ ತಮಗೆ ಮತ್ತು ಕುಟುಂಬ ಸದಸ್ಯರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೆಹಲಿ ಪೊಲೀಸರು ನೂಪುರ್ ಶರ್ಮಾ ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡಿದ್ದಾರೆ.
ನೂಪುರ್ ಶರ್ಮಾ 2015ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿದು ಸೋತಿದ್ದರು. ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಅವರು ಅರುಣ್ ಜೇಟ್ಲಿ, ಅಮಿತ್ ಶಾ ಜೊತೆ ಕೆಲಸ ಮಾಡಿದ್ದಾರೆ.












Click it and Unblock the Notifications