ಪ್ರಸಾದ ತಿಂದವನ ಕಥೆ ಅಷ್ಟೇ; ಎರಡು ತಿಂಗಳಿಗೊಂದು ಕೊಲೆ ಕಡ್ಡಾಯ!
ಅಮರಾವತಿ, ನವೆಂಬರ್.06: ಕೊಲೆ ಮಾಡೋದು ಅಂದರೆ ಇವನಿಗೆ ನೀರು ಕುಡಿದಷ್ಟೇ ಸಲೀಸು. ಎರಡು ತಿಂಗಳಿಗೆ ಕನಿಷ್ಠ ಒಂದು ಮರ್ಡರ್ ಮಾಡುತ್ತಿದ್ದ ಐನಾತಿ ಆಸಾಮಿಗೆ ಆಂಧ್ರಪ್ರದೇಶ ಪೊಲೀಸರು ಇದೀಗ ನೀರು ಕುಡಿಸಿದ್ದಾರೆ. 20 ತಿಂಗಳಲ್ಲಿ 10 ಕೊಲೆ ಮಾಡಿದ ಭೂಪನನ್ನ ಹಿಡಿದು ಶ್ರೀಕೃಷ್ಣ ಪರಮಾತ್ಮನ ಆವಾಸ ಸ್ಥಾನಕ್ಕೆ ಅಟ್ಟಿದ್ದಾರೆ. ಇದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ನಡೆದ ಸಾಲು ಸಾಲು ಕೊಲೆಗಳ ಕಥೆ.
ಮಂತ್ರಶಕ್ತಿ ನೆಪದಲ್ಲಿ ಮರ್ಡರ್!
ರಿಯಲ್ ಎಸ್ಟೇಟ್ ಉದ್ಯಮಿ ವೆಲ್ಲಂಕಿ ಸಿಂಹಾದ್ರಿಗೆ ವ್ಯವಹಾರ ಸರಿಯಾಗಿ ಕೈ ಕೊಟ್ಟಿತ್ತು. ಇದರಿಂದ ಬೀದಿಗೆ ಬಂದ ಸಿಂಹಾದ್ರಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಇಷ್ಟೇ ಆಗಿದ್ದರೆ ಇಂದು ಪೊಲೀಸರ ಅತಿಥಿ ಆಗಿರುತ್ತಿರಲಿಲ್ಲ. ಆದರೆ, ಕಳೆದ ಫೆಬ್ರುವರಿ 2018 ರಿಂದ 2019ರ ಅಕ್ಟೋಬರ್ ಅವಧಿಯಲ್ಲಿ ಪಶ್ಚಿಮ ಗೋದಾವರಿಯ ಕೃಷ್ಣಾ ಜಿಲ್ಲೆಯಲ್ಲಿ ಸಾಲು ಸಾಲು 10 ಕೊಲೆಗಳು ನಡೆದವು. ಇದಕ್ಕೆಲ್ಲ ಕಿಂಗ್ ಪಿನ್ ಆಗಿದ್ದವನೇ ಈ ವೆಲ್ಲಂಕಿ ಸಿಂಹಾದ್ರಿ.
ತನ್ನಲ್ಲಿ ಅತಿಮಾನುಷ ಶಕ್ತಿಯಿದೆ. ನಿಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳುತ್ತಲೇ ಸಿಂಹಾದ್ರಿ 10 ಕೊಲೆ ಮಾಡಿದ್ದಾನೆ. ಪ್ರಸಾದದ ರೂಪದಲ್ಲಿ ಸೈನೆಡ್ ನ್ನು ನೀಡಿ, ಬಳಿಕ ಮನೆಯಲ್ಲಿನ ಹಣ, ಚಿನ್ನವನ್ನ ಕದ್ದು ಸಿಂಹಾದ್ರಿ ಎಸ್ಕೇಪ್ ಆಗುತ್ತಿದ್ದ. ಕಳೆದ ಅಕ್ಟೋಬರ್.16ರಂದು ನಾಗರಾಜ್ ಎಂಬುವವರಿಗೆ ಮಂತ್ರಶಕ್ತಿಯುಳ್ಳ ನಾಣ್ಯ ನೀಡುವುದಾಗಿ ಸಿಂಹಾದ್ರಿ ಕರೆಸಿಕೊಂಡಿದ್ದಾನೆ. ಬಳಿಕ ಪ್ರಸಾದದ ರೂಪದಲ್ಲಿ ನೀಡಿದ್ದ ಸೈನೆಡ್ ಸೇವಿಸುತ್ತಿದ್ದಂತೆ ನಾಗರಾಜ್ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಅವರಲ್ಲಿದ್ದ 2 ಲಕ್ಷ ರೂಪಾಯಿ ಹಣ ಹಾಗೂ ಚಿನ್ನ ಕದ್ದು ಹೋಗಿದ್ದಾನೆ.

ಪ್ರಜ್ಞೆತಪ್ಪಿ ಬಿದ್ದಿದ್ದ ನಾಗರಾಜ್ ರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆ ಫಲಿಸದೇ ನಾಗರಾಜ್ ಮೃತಪಟ್ಟರು. ಇನ್ನು, ನಾಗರಾಜ್ ಸಾವು ಹಾಗೂ ಕಳುವಾದ ಹಣ, ಚಿನ್ನದ ಬಗ್ಗೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ತನಿಖೆ ಕೈಗೆತ್ತುಕೊಂಡ ಯೆಲ್ಲೂರು ಪೊಲೀಸರು ಕೊಲೆ ಹಿಂದಿದ್ದ ಕಿಂಗ್ ಪಿನ್ ವೆಲ್ಲಂಕಿ ಸಿಂಹಾದ್ರಿಯನ್ನ ಬಂಧಿಸಿದ್ದಾರೆ. ಜೊತೆಗೆ ಸಿಂಹಾದ್ರಿಗೆ ಸೈನೆಡ್ ಸರಬರಾಜು ಮಾಡುತ್ತಿದ್ದ ಮತ್ತೊಬ್ಬ ಆರೋಪಿ ಶೇಕ್ ಅಮೀನ್ ಉಲ್ಲಾನನ್ನು ಕೂಡಾ ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಆರೋಪಿ ಸಿಂಹಾದ್ರಿ 20 ತಿಂಗಳಿನಲ್ಲಿ 10 ಕೊಲೆ ಮಾಡಿರುವ ವಿಚಾರ ಹೊರ ಬಿದ್ದಿದೆ. 10 ಕೊಲೆ ಮಾಡಿರುವ ಆರೋಪಿ ವಿರುದ್ಧ ನಾಲ್ಕು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.












Click it and Unblock the Notifications