Breaking; ಹನುಮಾನ್ ಚಾಲೀಸಾ ವಿವಾದ ಬಿಜೆಪಿ ವಿರುದ್ಧ 'ಸಾಮ್ನಾ' ಕಿಡಿ
ಮುಂಬೈ, ಏಪ್ರಿಲ್ 25; ಮಹಾರಾಷ್ಟ್ರ ರಾಜ್ಯದಲ್ಲಿ ಹನುಮಾನ್ ಚಾಲೀಸಾ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರಾಣಾ ಕೌರ್ ಬಂಧನದ ಬಳಿಕ ಈ ಕುರಿತು ಚರ್ಚೆಗಳು ಜೋರಾಗಿವೆ.
ಸೋಮವಾರ ಶಿವಸೇನೆಯ ಮುಖವಾಣಿ 'ಸಾಮ್ನಾ' ಪತ್ರಿಕೆ ಸಂಪಾದಕೀಯದಲ್ಲಿ ಹನುಮಾನ್ ಚಾಲೀಸಾ ವಿವಾದದ ಬಗ್ಗೆ ಬರೆಯಲಾಗಿದೆ. ರಾಜ್ಯದಲ್ಲಿ ಉಂಟಾಗಿರುವ ವಿವಾದಕ್ಕೆ ಪ್ರತಿಪಕ್ಷ ಬಿಜೆಪಿಯೇ ಕಾರಣ ಎಂದು ಆರೋಪಿಸಿದೆ.
ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಉಂಟು ಮಾಡಿರುವ ವಿವಾದವನ್ನು ಬೆಂಬಲಿಸಲು ಸಾಧ್ಯವಿಲ್ಲ. ಹನುಮಾನ್ ಚಾಲೀಸಾ ವಿವಾದದ ಹಿಂದೆ ಬಿಜೆಪಿ ಇದೆ ಎಂದು ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಆರೋಪ ಮಾಡಲಾಗಿದೆ.

ಮುಂಬೈನಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ ಶಾಸಕ, ಸಂಸದರನ್ನು ಬಳಕೆ ಮಾಡಿಕೊಂಡಿದೆ. ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರಾಣಾ ಕೌರ್ ಬಿಜೆಪಿ ನಾಯಕರ ಅಣತಿಯಂತೆ ವಿವಾದ ಎಬ್ಬಿಸಿದ್ದಾರೆ ಎಂದು ದೂರಿದೆ.
ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರಾಣಾ ಕೌರ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಣೆ ಮಾಡಿದ್ದರು. ಬಳಿಕ ಪೊಲೀಸರು ನೋಟಿಸ್ ನೀಡಿದ್ದರು.
ಶನಿವಾರ ಹನುಮಾನ್ ಚಾಲೀಸಾ ಪಠಿಸುವ ಘೋಷಣೆ ಖಂಡಿಸಿ ಶಿವಸೇನೆ ಕಾರ್ಯಕರ್ತರು ನವನೀತ್ ಕೌರ್ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ದಂಪತಿಗಳು ತಮ್ಮ ತೀರ್ಮಾನ ವಾಪಸ್ ಪಡೆದಿದ್ದೇವೆ ಎಂದು ಹೇಳಿದ್ದರು. ಆದರೆ ಶನಿವಾರ ರಾತ್ರಿ ಪೊಲೀಸರು ನವನೀತ್ ಕೌರ್ ರಾಣಾ ಮತ್ತು ಆಕೆಯ ಪತಿ ರಾಣಾ ಕೌರ್ ಬಂಧಿಸಿದ್ದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸರ್ಕಾರಕ್ಕೆ ವಿವಾದವನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದರು.
ಭಾನುವಾರ ಪೊಲೀಸರು ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರಾಣಾ ಕೌರ್‌ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ 14 ದಿನಗಳ ಕಾಲ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.












Click it and Unblock the Notifications