ಮಹಾರಾಷ್ಟ್ರ ರಾಜಕೀಯ; ಅಮಿತ್ ಶಾ ಅಂತಿಮ ತೀರ್ಮಾನ
ಮುಂಬೈ, ಅಕ್ಟೋಬರ್ 28 : ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಇನ್ನೂ ಅಂತಿಮಗೊಂಡಿಲ್ಲ. ಅಕ್ಟೋಬರ್ 30ರಂದು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡುವ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಜಟಾಪಟಿ ನಡೆಯುತ್ತಿದೆ. ಈ ಹಗ್ಗ ಜಗ್ಗಾಟ ಹೈಕಮಾಂಡ್ ಅಂಗಳಕ್ಕೆ ತಲುಪಿದೆ.

ಸೋಮವಾರ ಬಿಜೆಪಿ ಮತ್ತು ಶಿವಸೇನೆ ನಾಯಕರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡಿಲ್ಲ. ಆದ್ದರಿಂದ, ದೆಹಲಿಗೆ ಮಹಾರಾಷ್ಟ್ರ ರಾಜಕೀಯ ದೆಹಲಿಗೆ ವರ್ಗಾವಣೆಗೊಂಡಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಉದ್ಭವ್ ಠಾಕ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್, ದೇವೇಂದ್ರ ಫಡ್ನವೀಸ್ ಅಕ್ಟೋಬರ್ 30ರಂದು ಸಭೆ ನಡೆಸಲಿದ್ದಾರೆ. ಸರ್ಕಾರ ರಚನೆ ಬಗ್ಗೆ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಎರಡೂ ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡಲಿವೆ. ಉಳಿದಂತೆ ಕಾಂಗ್ರೆಸ್ 44 ಮತ್ತು ಎನ್‌ಸಿಪಿ 54 ಸ್ಥಾನ ಗೆದ್ದಿವೆ. 13 ಪಕ್ಷೇತರರು ಗೆಲುವು ಸಾಧಿಸಿದ್ದಾರೆ.












Click it and Unblock the Notifications