ಅತೃಪ್ತ ಶಾಸಕರ ಭೇಟಿಗೆ ಬಂದ ನಾಯಕರಿಗೆ ಮುಂಬೈ ರೌಂಡ್ಸ್!
ಮುಂಬೈ, ಜುಲೈ 10: ಅತೃಪ್ತ ಶಾಸಕರನ್ನು ಕರೆದುಕೊಂಡು ಬರುವ ಸಲುವಾಗಿ ಮುಂಬೈಗೆ ತೆರಳಿರುವ ನಾಯಕರು ನಗರದ ಪ್ರದಕ್ಷಿಣೆ ಹಾಕುವಂತಾಗಿದೆ.
ಮುಂಬೈನ ರೆನೈಸಾನ್ಸ್ ಹೋಟೆಲ್ ಮುಂದೆ ಶಾಸಕರಿಗಾಗಿ ಕಾದು ಕುಳಿತಿದ್ದ ಡಿಕೆ ಶಿವಕುಮಾರ್ ನೇತೃತ್ವದ ನಾಲ್ವರು ಮುಖಂಡರ ತಂಡವನ್ನು ಅಲ್ಲಿನ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮಾತ್ರವಲ್ಲ, ಮುಂಬೈ ದರ್ಶನ ಮಾಡಿಸುತ್ತಿದ್ದಾರೆ.
ತಮ್ಮನ್ನು ಬಂಧಿಸಿರುವ ಪೊಲೀಸರು ತಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿಯುತ್ತಿಲ್ಲ. ಸಚಿವ ಡಿಕೆ ಶಿವಕುಮಾರ್ ಅವರನ್ನು ಒಂದು ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರೆ, ಸಚಿವ ಜಿಟಿ ದೇವೇಗೌಡ, ಶಿವಲಿಂಗೇಗೌಡ ಮತ್ತು ಬಾಲಕೃಷ್ಣ ಅವರನ್ನು ಮತ್ತೊಂದು ವಾಹನದಲ್ಲಿ ಕರೆದೊಯ್ಯುತ್ತಿದ್ದಾರೆ.

ಡಿಕೆ ಶಿವಕುಮಾರ್ ಅವರು ಜತೆಗಿಲ್ಲದ ಕಾರಣ ಭಾಷೆಯ ಸಮಸ್ಯೆಯಿಂದಾಗಿ ಈ ಮೂವರು ಮುಖಂಡರು ಪರದಾಡುವಂತಾಗಿದೆ. ಪೊಲೀಸರೊಂದಿಗೆ ಚರ್ಚಿಸಲು, ತಮ್ಮನ್ನು ಎಲ್ಲಿಗೆ ಕರೆದೊಯುತ್ತಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ.
ಹೋಟೆಲ್‌ನಿಂದ ತಮ್ಮ ವಾಹನದಲ್ಲಿ ಕರೆದುಕೊಂಡು ಹೊರಟ ಪೊಲೀಸರು ಮುಂಬೈ ಹೊರವಲಯಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ. ಆದರೆ ಯಾವ ಪ್ರದೇಶದಲ್ಲಿ ಇದ್ದೇವೆ ಎನ್ನುವುದು ಗೊತ್ತಾಗಿಲ್ಲ.
'ಕಸ್ಟಡಿಗೆ ತೆಗೆದುಕೊಂಡು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಮುಂಬೈ ಏನು ನಮ್ಮ ಹಳ್ಳಿಯೇ? ನಮ್ಮದು ಕನ್ನಡ. ಈ ಪೊಲೀಸರು ಹಿಂದಿ, ಇಂಗ್ಲಿಷ್. ನಮಗೆ ಗೊತ್ತಾಗುತ್ತಿಲ್ಲ. ಏನು ಮಾಡೋದು. ಇಲ್ಲಿ ಬಂದ ಬಳಿಕ ಅವರು ಹೇಳಿದಂತೆ ಕೇಳಬಹುದು' ಎಂದು ಶಿವಲಿಂಗೇಗೌಡ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದರು.
ನಾವು ಬಾಂಬೆಗೆ ಬಂದಿರುವುದು ಬಿಜೆಪಿ ಕೈವಾಡ ಇದೆಯೋ ಅವರೇ ಸ್ವಯಂ ಪ್ರೇರಣೆಯಿಂದ ಬಂದದ್ದೋ ತಿಳಿಯಲು. ಈಗ ಬಿಜೆಪಿಯವರೇ ಹೋಟೆಲ್‌ನಲ್ಲಿ ತುಂಬಿಕೊಂಡಿರುವುದು ಇದನ್ನು ದೃಢಪಡಿಸಿದೆ ಎಂದು ಹೇಳಿದರು.
ನಮ್ಮ ಶಾಸಕರು ಬಿಜೆಪಿ ವಶದಲ್ಲಿದ್ದಾರೆ. ಆರ್ ಅಶೋಕ್ ಮತ್ತು ಬೋಪಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿತ್ತು. ಕೆಲವು ಶಾಸಕರು ಹಿರಿಯ ನಾಯಕರು ಯಾರಾದರೂ ಬಂದು ಮಾತನಾಡಿದರೆ ಎಲ್ಲ ಸರಿ ಹೋಗಬಹುದು ಎಂದಿದ್ದರು. ನಾವು ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದರೂ ನಮ್ಮನ್ನು ಒಳಗೆ ಬಿಟ್ಟಿಲ್ಲ ಎಂದು ಆರೋಪಿಸಿದರು.
ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್‌ನ ಇತರೆ ನಾಯಕರನ್ನು ಮುಂಬೈ ವಿವಿಯ ಅತಿಥಿ ಗೃಹದಲ್ಲಿ ಇರಿಸಲಾಗಿದೆ.












Click it and Unblock the Notifications