ಮಹಾರಾಷ್ಟ್ರ ಚುನಾವಣಾ ರ‍್ಯಾಲಿಯಲ್ಲಿ ಮೋದಿ ವಿರುದ್ದ ರಾಹುಲ್ ಮಿಂಚು, ಗುಡುಗು
ಮುಂಬೈ, ಅ 15: ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿದ ಮೇಲೂ, ಸಂಸದ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ವಾರ್ಧಾದಲ್ಲಿ ಮಂಗಳವಾರ ಚುನಾವಣಾ ರ‍್ಯಾಲಿಯಲ್ಲಿ, ಮತ್ತೆ ಅಪನಗದೀಕರಣ ಮತ್ತು ಸರಕು, ಸೇವಾ ತೆರಿಗೆಯ ವಿಚಾರವನ್ನು ಇಟ್ಟುಕೊಂಡು ಕೇಂದ್ರ ಸರಕಾರವನ್ನು ಕಟುವಾದ ಶಬ್ದದಲ್ಲಿ ಟೀಕಿಸಿದ್ದಾರೆ.
"ಕೆಲವೇ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಕಾರ್ಪೋರೇಟ್ ಟ್ಯಾಕ್ಸ್ ಅನ್ನು ರದ್ದು ಮಾಡಿದ್ದಾರೆ. ದೇಶದ ಹದಿನೈದು ಶ್ರೀಮಂತ ಉದ್ಯಮಿಗಳ ತೆರಿಗೆಯ ಮೊತ್ತವಾದ 1,25,000 ಕೋಟಿ ಹಣವನ್ನೂ ಮನ್ನಾ ಮಾಡಿದ್ದಾರೆ" ಎಂದು ರಾಹುಲ್ ಸಭೆಯಲ್ಲಿ ಹೇಳಿದರು.

"ಕಳೆದ ಐದು ವರ್ಷಗಳಲ್ಲಿ ದೇಶದ ಶ್ರೀಮಂತ ಉದ್ಯಮಿಗಳ 5,50,000 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ. ಅದಾನಿಗೆ ದೇಶದ ಎಲ್ಲಾ ಬಂದರು, ಏರ್ಪೋರ್ಟ್ ಗಳ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಸರಕಾರೀ ಸಂಸ್ಥೆಗಳನ್ನೆಲ್ಲಾ ಖಾಸಗೀಕರಣ ಮಾಡಲು ಮೋದಿ ಹೊರಟಿದ್ದಾರೆ" ಎಂದು ಸಭೆಯಲ್ಲಿ, ಕೇಂದ್ರದ ವಿರುದ್ದ ರಾಹುಲ್ ಗುಡುಗಿದರು.
"ರೈತರು ಒದ್ದಾಡುತ್ತಿರಲಿ, ಯುವಕರು ಕೆಲಸವಿಲ್ಲದೇ ಓಡಾಡುತ್ತಿದ್ದರೂ, ಇದರಿಂದ ಮೋದಿಗೆ ಯಾವ ವ್ಯತ್ಯಾಸವೂ ಇಲ್ಲ. ಆದಿವಾಸಿ ಬಿಲ್ ಅನ್ನು ಬದಲಿಸಲು ಹೊರಟಿದ್ದಾರೆ. ಆದರೆ, ಜಿಎಸ್ಟಿ ಎನ್ನುವುದು ಕಾನೂನು ಅದನ್ನು ಹೇಗೆ ಬದಲಿಸುವುದು ಎಂದು ಹಣಕಾಸು ಸಚಿವರು ಹೇಳುತ್ತಾರೆ" ಎಮ್ದು ರಾಹುಲ್ ವ್ಯಂಗ್ಯವಾಡಿದರು.
"ಬಡವರಿಗಾಗಿರುವ ಕಾನೂನನ್ನು ಎರಡು ನಿಮಿಷದಲ್ಲಿ ಬದಲಿಸುವ ಮೋದಿಗೆ ಇದೆಲ್ಲಾ ಬೇಕಾಗಿಲ್ಲ. ಸಣ್ಣ ಮತ್ತು ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುವ ಜಿಎಸ್ಟಿ ಕಾನೂನನ್ನು ಮಾತ್ರ ಇವರಿಗೆ ಬದಲಿಸಲು ಸಾಧ್ಯವಿಲ್ಲ" ಎಂದು ರಾಹುಲ್ ಆಕ್ರೋಶ ವ್ಯಕ್ತ ಪಡಿಸಿದರು.
"ನೋಟ್ ಬ್ಯಾನ್ ಮತ್ತು ಗಬ್ಬರ್ ಸಿಂಗ್ ಟ್ಯಾಕ್ಸ್ ನಿಂದ ಯಾರಿಗೂ ಲಾಭವಾಗಿಲ್ಲ. ನಿಮಗೂ ಅದರ ಅನುಭವವಾಗಿರಬೇಕು" ಎಂದು ರಾಹುಲ್, ಚುನಾವಾಣಾ ರ‍್ಯಾಲಿಯಲ್ಲಿ, ಮೋದಿ ವಿರುದ್ದ ಕಿಡಿಕಾರಿದ್ದಾರೆ.












Click it and Unblock the Notifications