ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆ: ಶಾಲಾ, ಕಾಲೇಜುಗಳಿಗೆ ಜು.16ರವರೆಗೂ ರಜೆ
ಮುಂಬೈ, ಜು.14: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಮುಂದುವರೆಯುತ್ತಲೇ ಇದೆ. ಮುಂಬೈ, ರಾಯಗಢ, ರತ್ನಗಿರಿ, ಸಿಂಧುದುರ್ಗ, ಕೊಲ್ಹಾಪುರ, ಸತಾರಾ, ಅಮರಾವತಿ ಮತ್ತು ಥಾಣೆಯಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮಹಾರಾಷ್ಟ್ರದ 8 ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ಪಾಲ್ಘರ್, ನಾಸಿಕ್ ಮತ್ತು ಪುಣೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರಿ ಮಳೆಯ ಮುನ್ಸೂಚನೆ ಇರುವ ಕಾರಣ ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಶಾಲಾ-ಕಾಲೇಜುಗಳಿಗೆ ಜುಲೈ 16 ರವರೆಗೆ ಸರ್ಕಾರ ರಜೆ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಕೆಲವೆಡೆ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಈ ಹಿಂದೆ ಜುಲೈ 10 ರಿಂದ ಜುಲೈ 13 ರವರೆಗೆ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆಡಳಿತ ಮಂಡಳಿ ಆದೇಶಿಸಿತ್ತು. ಇದೀಗ ವರುಣನ ಅಬ್ಬರ ಮುಂದುವರಿದಿದ್ದು, ರಜೆಯ ಆದೇಶವನ್ನು ಜುಲೈ 16ರವರೆಗೆ ವಿಸ್ತರಿಸಲಾಗಿದೆ.

ನಾಗ್ಪುರದಲ್ಲಿ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಜನರ ರಕ್ಷಣೆಗೆ ಎನ್‌ಡಿಆರ್‌ಎಫ್ ತಂಡಗಳು ಕಾರ್ಯಚರಣೆ ಮಾಡುತ್ತಿವೆ. ಸಂತ್ರಸ್ತರಿಗಾಗಿ ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮಳೆ ಅಬ್ಬರಕ್ಕೆ ನಾಗ್ಪುರದಲ್ಲಿ10 ಜನರು ಸಾವನ್ನಪ್ಪಿದ್ದಾರೆ. ಜುಲೈ 1ರಿಂದ ಈವರೆಗೆ ಮಳೆಗೆ ಸಿಲುಕಿ 20 ಜನರು ಸಾವನ್ನಪ್ಪಿದ್ದು, 19 ಜನರು ಗಂಭೀರ ಗಾಯಗೊಂಡಿದ್ದಾರೆ. ಹಾಗೂ ಗಡ್ಚಿರೋಲಿ ಜಿಲ್ಲೆಯಲ್ಲಿ ಮೂವರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ 3 ದಿನಗಳ ಕಾಲ ನಾಗ್ಪುರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಸಿಕ್ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋದಾವರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಪಕ್ಕದಲ್ಲಿರುವ ದೇವಾಲಯಗಳು ಮುಳುಗಿವೆ ಎಂದಿದ್ದಾರೆ. ದೇಶದ ಹಲವೆಡೆ ವರುಣನ ಅಬ್ಬರ ಮುಂದುವರೆದಿದ್ದು ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಅದರಲ್ಲೂ ಮಹಾರಾಷ್ಟ್ರವನ್ನ ವರುಣ ಆವರಿಸಿದ್ದು ಜನರಿಗೆ ಸಂಕಷ್ಟ ತಂದೊಂಡ್ಡಿದೆ. ಈಗಾಗಲೇ ಮನೆ, ಮಠಗಳನ್ನ ಕಳೆದುಕೊಂಡು ಜನರು ತತ್ತರಿಸಿಹೋಗಿದ್ದಾರೆ. ಮಾಹಾರಾಷ್ಟ್ರ ಸರ್ಕಾರ ನದಿ ಪ್ರದೇಶಗಳ ಜನರನ್ನ ಬೇರೆಡೆಚಸ್ಥಳಾಂತಿಸುವ ಕೆಲಸದಲ್ಲಿ ತೊಡಗಿದೆ.












Click it and Unblock the Notifications