ಮುಂಬೈ ಮಹಾಮಳೆ: ರೈಲು ಬಂದ್, ಕರೆಂಟ್ ಇಲ್ಲ
ಮುಂಬೈ, ಜೂ, 19: ಭಾರೀ ಮಳೆ ಮುಂಬೈನಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಸಾವಿನ ಸರಣಿಯ ಪೂರ್ಣ ಲೆಕ್ಕ ಇಲ್ಲಿಯವರೆಗೆ ಸಿಕ್ಕಿಲ್ಲ. ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಶುಕ್ರವಾರ ಸಹ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಪರಿಣಾಮ ರೈಲು ನಿಲ್ದಾಣಗಳಲ್ಲಿ ನೀರು ತುಂಬಿಕೊಂಡಿದ್ದರೆ, ರಸ್ತೆ, ಚರಂಡಿ ನೀರೆಲ್ಲಾ ಹರಿದು ಪ್ರವಾಹ ಸ್ಥಿತಿ ಉಂಟಾಗಿದೆ. ಶುಕ್ರವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ಬೆಂಗಳೂರು ಮಳೆ ಭೀಕರ ಚಿತ್ರಗಳು]
ಮುಂಗಾರು ಮಾರುತಗಳು ಸಮುದ್ರ ತೀರದ ಭಾಗದಲ್ಲಿ ಆರ್ಭಟಿಸಲು ಆರಂಭಿಸಿವೆ. ನವದೆಹಲಿಯಲ್ಲಿ ಒಮ್ಮೆ ಗುಡುಗಿದ್ದ ವರುಣ ಮಾಯವಾಗಿದ್ದ. ದೇಶದ ಎಲ್ಲೆಡೆ ಏಕರೂಪದ ಮಳೆಯಾಗುತ್ತಿಲ್ಲ. ಮುಂಬೈ ಸೇರಿದಂತೆ ಹಲವೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯ ಆವಾಂತರ ನೋಡಿ

ರೈಲು ಸಂಚಾರ ಬಂದ್
ರೈಲು ಹಳಿಗಳು ನೀರಿನಿಂದ ಸಂಪೂರ್ಣ ಮುಳುಗಿ ಹೋಗಿದ್ದು ಛತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್ಟಿ) ಮತ್ತು ಕುರ್ಲಾ, ಸೆಂಟ್ರಲ್ ಪ್ರದೇಶದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಂಬೈ ನಿವಾಸಿಗಳ ಜೀವನಾಡಿಯಾಗಿರುವ ಲೋಕಲ್ ರೈಲಿನಲ್ಲಿ ದಿನಂಪ್ರತಿ 70ರಿಂದ 80 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಮಹಾಮಳೆ ದೈನಂದಿನ ಕೆಲಸಕ್ಕೆ ಅಡ್ಡಿ ಉಂಟುಮಾಡಿದೆ.
|
ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್
ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಗುರುವಾರ ರಾತ್ರಿಯಿಂದ #MumbaiRains ಟ್ರೆಂಡಿಂಗ್ ನಲ್ಲಿ ಇದ್ದು ನಾಗರಿಕರು ಮಳೆಯ ಆವಾಂತರಗಳ ಫೋಟೋವನ್ನು ಪ್ರಕಟಿಸುತ್ತ ತಮ್ಮ ಅನುಭವ ಬರೆದುಕೊಳ್ಳುತ್ತಿದ್ದಾರೆ.

ರೈಲ್ವೆ ಇಲಾಖೆ ಎಚ್ಚರಿಕೆ
ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ನಿಮಗೆ ತುಂಬಾ ಅಗತ್ಯವಿದ್ದರೆ ಮಾತ್ರ ಪ್ರಯಾಣ ಕೈಗೊಳ್ಳಿ ಎಂದು ರೈಲ್ವೆ ಇಲಾಖೆ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.

ಮೊಬೈಲ್ ನೆಟ್ ವರ್ಕ್ ಇಲ್ಲ
ಮುಂಬೈ ಮಹಾನಗರದ ಎಲ್ಲ ಕಡೆ ಮೊಬೈಲ್ ಟವರ್ ಗಳು ಧರೆಗುರುಳಿದೆ. ವಿದ್ಯುತ್ ಕೂಡಾ ಮಾಯವಾಗಿದ್ದು ಶುಕ್ರವಾರವೂ ಮಳೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಸಂಶಯವಿಲ್ಲ.
|
ಶಾಲೆ ಬಂದ್, ಪರೀಕ್ಷೆ ಮುಂದಕ್ಕೆ
ಮಹಾಮಳೆ ಪರಿಣಾಮ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಡೆಯಬೇಕಿದ್ದ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದ್ದು ಮನೆ ಬಿಟ್ಟು ಹೊರಬರದಂತೆ ನಾಗರಿಕರಿಗೆ ಮನವಿ ಮಾಡಿಕೊಳ್ಳಲಾಗಿದೆ.

ರೈಲು ಸಂಚಾರ ವ್ಯತ್ಯಯ ಸಾಧ್ಯತೆ
ಮುಂಬೈಗೆ ದೇಶದ ಹಲವೆಡೆಯಿಂದ ತೆರಳುವ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮಳೆ ನಿಂತು ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ಮೇಲೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.












Click it and Unblock the Notifications