ಹನುಮಾನ್ ಚಾಲೀಸ್: ಸಿಎಂ ಠಾಕ್ರೆ, ಶರದ್ ಪವಾರ್ ಮಹತ್ವದ ಭೇಟಿ
ಮುಂಬೈ, ಏಪ್ರಿಲ್ 30: ಮಹಾ ವಿಕಾಸ್ ಅಗಾಡಿ ನೇತೃತ್ವದಲ್ಲಿ ಸರಕಾರವನ್ನು ಮುನ್ನಡೆಸುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಅವರ ನಿವಾಸ ವರ್ಷಾದಲ್ಲಿ ಭೇಟಿಯಾಗಿದ್ದಾರೆ.
ಶಿವಸೇನೆ ಮತ್ತು ಎನ್‌ಸಿಪಿ ಮಿತ್ರಪಕ್ಷಗಳು ಇತರ ರಾಜಕೀಯ ಬೆಳವಣಿಗೆಗಳ ಜೊತೆಗೆ, ರಾಣಾ ದಂಪತಿಯನ್ನು ಒಳಗೊಂಡ ವಿವಾದ ಮತ್ತು ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವ ರಾಜ್ ಠಾಕ್ರೆ ಅವರ ಬೇಡಿಕೆಯ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು ಎಂದು ಶಿವಸೇನೆ ನಾಯಕರೊಬ್ಬರು ತಿಳಿಸಿದ್ದಾರೆ.
ಎಂಎನ್ಎಸ್ ಮುಖ್ಯಸ್ಥ ಮತ್ತು ಸಿಎಂ ಉದ್ಧವ್ ಠಾಕ್ರೆಯವರ ಸೋದರ ಸಂಬಂಧಿಯೂ ಆಗಿರುವ ರಾಜ್ ಠಾಕ್ರೆ, ಈ ತಿಂಗಳ ಆರಂಭದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರವು ಮೇ 3 ರೊಳಗೆ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಇಲ್ಲದಿದ್ದರೆ, ಮಸೀದಿಗಳ ಮುಂದೆ ಹನುಮಾನ್ ಚಾಲೀಸ್ ಜೋರಾಗಿ ಪಠಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.

ಇದಲ್ಲದೇ, ಅಮರಾವತಿ ಕ್ಷೇತ್ರದ ಸಂಸದೆ ನವನೀತ್ ಕೌರ್ ರಾಣಾ ಮತ್ತು ಅವರ ಪತಿ, ಶಾಸಕರೂ ಆಗಿರುವ ರವಿ ರಾಣಾ ಅವರು ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿ ನಂತರ ಹಿಂದಕ್ಕೆ ಪಡೆದರು. ಆದಾಗ್ಯೂ ಅವರನ್ನು ಬಂಧಿಸಲಾಗಿತ್ತು.
"ಶರದ್ ಪವಾರ್ ಮತ್ತು ಸಿಎಂ ಠಾಕ್ರೆ, ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಅವರ ಬೇಡಿಕೆಯ ಬಗ್ಗೆ ಚರ್ಚೆ ನಡೆಸಿದರು. ಮುಂಬೈ ಸೇರಿದಂತೆ ರಾಜ್ಯದ ಇತರ ಕೆಲವು ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಆತಂಕ ಎದುರಾಗಬಹುದು. ಹಲವಾರು ಬಾರಿ ಅಧಿಕಾರಿಗಳನ್ನು ಕಳುಹಿಸಿ ರಾಜ್ ಠಾಕ್ರೆ ಮನವೊಲಿಸುವ ಕೆಲಸವನ್ನು ಮಾಡಲಾಗಿತ್ತು. ಆದರೆ, ಅವರು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ" ಎಂದು ಶಿವಸೇನೆಯ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ ನಾಯಕ ಆಶಿಸ್ ಶೆಲಾರ್ ಹೇಳಿಕೆಯೊಂದನ್ನು ಇತ್ತೀಚೆಗೆ ನೀಡಿದ್ದರು. "2017ರಲ್ಲಿ ಎನ್‌ಸಿಪಿಯೊಂದಿಗೆ ಬಿಜೆಪಿ ಕೈಜೋಡಿಸಲು ಸಿದ್ದವಾಗಿತ್ತು. ಆದರೆ, ಶಿವಸೇನೆಯೊಂದಿಗೆ ಸಂಬಂಧವನ್ನು ಕಡಿದುಕೊಳ್ಳಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದರಿಂದ ಮೈತ್ರಿಕೂಟ ರಚನೆಯಾಗಿರಲಿಲ್ಲ"ಎಂದು ಆಶಿಶ್ ಸೆಲಾರ್ ಹೇಳಿಕೆಯನ್ನು ನೀಡಿದ್ದರು. ಈ ವಿಚಾರವೂ ಠಾಕ್ರೆ ಮತ್ತು ಪವಾರ್ ನಡುವಿನ ಮಾತುಕತೆಯ ವೇಳೆ ಚರ್ಚೆಗೆ ಬಂದಿತ್ತು.












Click it and Unblock the Notifications