ಭೂಗತ ಪಾತಕಿ ದಾವೂದ್ ಗ್ಯಾಂಗಿನ ಏಜಾಜ್ ಬಂಧನ
ಮುಂಬೈ, ಜನವರಿ 09: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿಗೆ ಸೇರಿದ ಮಾಜಿ ಬಂಟ ಏಜಾಜ್ ಲಕ್ಡಾವಾಲನನ್ನು ಪೊಲೀಸರು ಬಂಧಿಸಿದ್ದಾರೆ.
ಛೋಟಾ ರಾಜನ್, ದಾವೂದ್ ಇಬ್ರಾಹಿಂ ಬಂಟನಾಗಿದ್ದ ಏಜಾಜ್ ನಂತರ ಗ್ಯಾಂಗಿನಿಂದ ದೂರ ಉಳಿದಿದ್ದ. ಈತನ ಮೇಲೆ ಸುಮಾರು 25 ಬೆದರಿಕೆ, ಕೊಲೆ ಯತ್ನ, ಗಲಭೆಗೆ ಕುಮ್ಮಕ್ಕು ಮುಂತಾದ ಪ್ರಕರಣಗಳು ದಾಖಲಾಗಿವೆ.
"ಕಳೆದ ಆರು ತಿಂಗಳಿನಿಂದ ಏಜಾಜ್ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು. ಡಿಸೆಂಬರ್ 28ರಂದು ಆತನ ಮಗಳನ್ನು ಬಂಧಿಸಿದ ಬಳಿಕ ಮಹತ್ವದ ಸುಳಿವು ಸಿಕ್ಕಿತ್ತು. ಬುಧವಾರದಂದು ಪಾಟ್ನಕ್ಕೆ ಬರುತ್ತಿರುವ ಖಚಿತ ಮಾಹಿತಿ ಸಿಕ್ಕ ಬಳಿಕ ಅಲ್ಲಿನ ಪೊಲೀಸರ ನೆರವಿನಿಂದ ಆತನನ್ನು ಬಂಧಿಸಿ ಮುಂಬೈಗೆ ಕರೆ ತರಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ರಸ್ತೋಗಿ ಹೇಳಿದರು.

ದಾವೂದ್, ಛೋಟಾ ರಾಜನ್ ಸಂಪರ್ಕ್ ಕಡಿತಗೊಂಡ ಬಳಿಕ 10 ವರ್ಷಗಳ ಹಿಂದೆ ತನ್ನದೇ ಹೊಸ ಗ್ಯಾಂಗ್ ಕಟ್ಟಿ ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ. ಮಲೇಷಿಯಾ, ಯುನೈಟೆಡ್ ಸ್ಟೇಟ್ಸ್, ನೇಪಾಳ ಮುಂತಾದ ದೇಶಗಳಲ್ಲಿ ಕಳೆದ 10 ವರ್ಷಗಳಲ್ಲಿ ವಾಸವಿದ್ದ. ಈತನ ವಿರುದ್ಧ ಇಂಟರ್ ಪೋಲ್ ನಿಂದ ನೋಟಿಸ್ ಕೂಡಾ ಜಾರಿಗೊಳಿಸಲಾಗಿತ್ತು.
ಕೆನಡಾದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಾಸಿಸುತ್ತಿದ್ದ ಏಜಾಜ್ ನ ಮಗಳು ಸೋನಿಯಾಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆಕೆ ನೀಡಿದ ಸುಳಿವಿನ ಆಧಾರದ ಮೇಲೆ ಏಜಾಜ್ ಬಂಧನವಾಗಿದ್ದು, ಜನವರಿ 21 ರ ತನಕ ಪೊಲೀಸ್ ಕಸ್ಟಡಿಗೆ ಮುಂಬೈ ಕೋರ್ಟ್ ನೀಡಿದೆ.












Click it and Unblock the Notifications