ರಾಜ್ ಠಾಕ್ರೆಗೆ ಏನಾದ್ರೂ ಸಂಭವಿಸಿದರೆ ಇಡೀ ಮಹಾರಾಷ್ಟ ಹೊತ್ತಿ ಉರಿಯಲಿದೆ: ಎಂಎನ್ಎಸ್
ಮುಂಬೈ ಮೇ 20: "ಒಂದು ವೇಳೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ(ಎಎಂನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ಏನಾದರೂ ಸಂಭವಿಸಿದರೆ ಇಡೀ ಮಹಾರಾಷ್ಟ ಹೊತ್ತಿ ಉರಿಯಲಿದೆ,'' ಎಂದು ಎಂಎನ್ಎಸ್ ವಿವಾದಾತ್ಮಕ ಹೇಳಿಕೆ ಬಿಡುಗಡೆ ಮಾಡಿದೆ.
ಅಜಾನ್ ಮತ್ತು ಧ್ವನಿವರ್ಧಕಗಳ ಬಳಕೆ ಕುರಿತು ಇತ್ತೀಚಿಗೆ ರಾಜ್ ಠಾಕ್ರೆ ಹೇಳಿಕೆ ಬೆನ್ನಲ್ಲೇ ಅವರಿಗೆ ಹಲವು ಪ್ರಾಣ ಬೆದರಿಕೆ ಕರೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಂಎನ್ಎಸ್ ಮಹಾರಾಷ್ಟ್ರದ ಲಾಲ್‌ಬಾಗ್ ಪ್ರದೇಶದಲ್ಲಿ ವಿವಾದಾತ್ಮಕ ಪೋಸ್ಟರ್ ಹಾಕಿದೆ.
ಇನ್ನೊಂದೆಡೆ, ಉತ್ತರ ಪ್ರದೇಶದ ಆಯೋಧ್ಯೆಗೆ ರಾಜ್ ಠಾಕ್ರೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಮರಾಠಿ ಭಾಷೆಯಲ್ಲಿ ಬಿಡುಗೊಳಿಸುವ ಪೋಸ್ಟರ್‌ನಲ್ಲಿ, ರಾಜ್ ಠಾಕ್ರೆ ಅವರ ಬೆಂಬಲಕ್ಕೆ ಮಹಾರಾಷ್ಟ್ರ ನಿಲ್ಲಲಿದೆ. ಅವರಿಗೆ ಏನಾದರೂ ಸಂಭವಿಸಿದರೇ ಇಡೀ ರಾಜ್ಯವೇ ಕೆರಳಲಿದೆ.

ಧ್ವನಿವರ್ಧಕಗಳ ವಿವಾದದ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ಅವರಿಗೆ ಪದೇ ಪದೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿದ್ದು, ಅವರಿಗೆ ಜೆಡ್ ಅಥವಾ ವೈ ಪ್ಲಸ್ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರಕಾರಕ್ಕೆ ಒತ್ತಾಯಿಸುತ್ತಾ ಬಂದಿದೆ. ಆದರೆ ಈ ಬೇಡಿಕೆಯನ್ನು ಇದುವರೆಗೂ ಮಹಾರಾಷ್ಟ್ರ ಸರಕಾರ ಪುರಸ್ಕರಿಸಿಲ್ಲ. ಆದರೂ ಅವರಿಗೆ ನೀಡಿರುವ ಭದ್ರತೆಯನ್ನು ಹೆಚ್ಚಿಸಿದ್ದು, ಭದ್ರತಾ ತಂಡದಲ್ಲಿರುವ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಂಖ್ಯೆಯನ್ನು ಸರಕಾರ ಹೆಚ್ಚಿಸಿದೆ.
"ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆರವುಗೊಳಿಸದಿದ್ದರೆ, ನಾವು ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸ ಪಠಿಸಲಿದ್ದೇವೆ,'' ಎಂದು ಧ್ವನಿವರ್ಧಕಗಳ ವಿವಾದದ ಹಿನ್ನೆಲೆಯಲ್ಲಿ ಇತ್ತೀಚಿಗೆ ರಾಜ್ ಠಾಕ್ರೆ ಹೇಳಿಕೆ ನೀಡಿದ್ದರು.

ಇದಾದ ಕೆಲವು ವಾರಗಳಲ್ಲಿ ಅವರಿಗೆ ಪ್ರಾಣ ಬೆದರಿಕೆ ಪತ್ರ ಬರೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹಾಗೂ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಗಮನ ಹರಿಸಿದ್ದು, ತನಿಖೆ ಮುಂದುವರಿದಿದೆ. ಇದಕ್ಕೂ ಮುನ್ನ ಕೆಲವು ದಿನಗಳ ಹಿಂದೆ, "ರಾಜ್ ಠಾಕ್ರೆ ಅವರನ್ನು ಅಯೋಧ್ಯೆಯ ಒಳಗಡೆ ಬಿಡುವುದಿಲ್ಲ,'' ಎಂದು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ ಸಿಂಗ್ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಎಂಎನ್ಎಸ್ ನಾಯಕ ಬಾಳಾ ನಂದಗಾವ್ಕರ್ ಮಾತನಾಡಿ, "ಎಂಎನ್ಎಸ್ ಮುಖ್ಯಸ್ಥರಿಗೆ ಏನಾದರೂ ಸಂಭವಿಸಿದರೆ, ಇಡೀ ಮಹಾರಾಷ್ಟ್ರವೇ ಹೊತ್ತು ಉರಿಯಲಿದೆ,'' ಎಂದು ಹೇಳಿದ್ದರು. ಈಗ ಇದೇ ರೀತಿಯ ಪೋಸ್ಟರ್ ಅನ್ನು ಎಂಎನ್ಎಸ್ ಬಿಡುಗಡೆಗೊಳಿಸಿದೆ.












Click it and Unblock the Notifications