'ಕೈ' ತಪ್ಪಿರುವ ಶಾಸಕರ ವಾಪಸ್ ಕರೆತರಲು ಸೇನಾಪತಿ ಡಿ.ಕೆ.ಶಿವಕುಮಾರ್ ಮುಂಬೈಗೆ
Recommended Video

ಬೆಂಗಳೂರು, ಜನವರಿ 15: ಕಾಂಗ್ರೆಸ್‌ನ ಕೆಲವು ಶಾಸಕರು ಬಿಜೆಪಿ ಪಾಳಯಕ್ಕೆ ಹಾರುವ ಉದ್ದೇಶದಿಂದ ಮುಂಬೈಗೆ ಹಾರಿರುವ ಬೆನ್ನಲ್ಲೇ ಅವರನ್ನು ವಾಪಸ್ ಕರೆತರಲು ಕರ್ನಾಟಕ ಕಾಂಗ್ರೆಸ್ ಸೇನಾಪತಿ ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಲಿದ್ದಾರೆ.
ಕೆ.ಸಿ.ವೇಣುಗೋಪಾಲ್ ಹಾಗೂ ಇತರ ನಾಯಕರ ಜೊತೆ ಇಂದು ಮಾತುಕತೆ ನಡೆಸಿದ ಬಳಿಕ ಡಿ.ಕೆ.ಶಿವಕುಮಾರ್ ಅವರು ಮುಂಬೈಗೆ ತೆರಳಿದ್ದು, ಅಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಶಾಸಕರನ್ನು ವಾಪಸ್ ಕರೆತರಲು ಯತ್ನ ನಡೆಸಲಿದ್ದಾರೆ.
ಅಂತರರಾಷ್ಟ್ರೀಯ ಸಮಾವೇಶವೊಂದರಲ್ಲಿ ಭಾಗವಹಿಸುವ ನೆಪ ಹೇಳಿ ಅವರು ಔರಂಗಾಬಾದ್‌ಗೆ ತೆರಳಲಿದ್ದಾರೆ. ಆದರೆ ಅಲ್ಲಿಂದ ಅವರು ಮುಂಬೈಗೆ ತೆರಳಲಿದ್ದಾರೆ. ಅವರು ಅಲ್ಲಿ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡುವ ಯತ್ನ ಮಾಡಲಿದ್ದಾರೆ.

ರಮೇಶ್ ಜಾರಕಿಹೊಳಿ, ಉಮೇಶ್ ಯಾದವ್, ಶ್ರೀಮಂತ ಪಾಟೀಲ್ ಸೇರಿ ಇನ್ನೂ ಕೆಲವು ಕಾಂಗ್ರೆಸ್ ಶಾಸಕರು ಮುಂಬೈನಲ್ಲಿ ಹೊಟೆಲ್ ಒಂದರಲ್ಲಿ ತಂಗಿದ್ದಾರೆ ಎನ್ನಲಾಗಿದೆ.
ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಡಿ.ಕೆ.ಶಿವಕುಮಾರ್ ಅವರು ನಿಶ್ಣಾತರಾಗಿದ್ದಾರೆ. ಹಾಗಾಗಿ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ಅವರಿಗೆ ಈ ಮಹತ್ವದ ಜವಾಬ್ದಾರಿಯನ್ನು ಹೊರಿಸಿದೆ.
ಬಿಜೆಪಿಯ ಎಲ್ಲ ಶಾಸಕರು ಗುರುಗ್ರಾಮದ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದು, ಅವರನ್ನು ಕಾಂಗ್ರೆಸ್-ಜೆಡಿಎಸ್ ಶಾಸಕರು ಸಂಪರ್ಕ ಮಾಡದಂತೆ ರಾಜ್ಯ ಬಿಜೆಪಿ ಎಚ್ಚರಿಕೆ ವಹಿಸಿದೆ. ಕರ್ನಾಟಕ ರಾಜಕೀಯವು ಪಲ್ಲಟದ ಅಂಚಿಗೆ ತಲುಪಿದೆ ಎಂದು ಗೋಚರವಾಗುತ್ತಿದ್ದು, ಸಂಜೆಯ ವೇಳೆಗೆ ಚಿತ್ರಣಸ್ಪಷ್ಟವಾಗಲಿದೆ.












Click it and Unblock the Notifications