ಸಚಿವ ಡಿ.ಕೆ.ಶಿವಕುಮಾರ್ ವಶಕ್ಕೆ ಪಡೆದ ಮುಂಬೈ ಪೊಲೀಸರು
Recommended Video
ಮುಂಬೈ, ಜುಲೈ 10 : ಕರ್ನಾಟಕದ ಕಾಂಗ್ರೆಸ್ ನಾಯಕ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅತೃಪ್ತ ಶಾಸಕರು ಇರುವ ರಿಸೈಸೆನ್ಸ್ ಹೋಟೆಲ್ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಬುಧವಾರ ಬೆಳಗ್ಗೆ 8ಗಂಟೆಯಿಂದ ಡಿ.ಕೆ.ಶಿವಕುಮಾರ್ ಅವರು ಮುಂಬೈನ ರಿಸೈಸೆನ್ಸ್ ಹೋಟೆಲ್ ಮುಂದೆ ಅತೃಪ್ತ ಶಾಸಕರ ಭೇಟಿಗೆ ಕಾದು ಕುಳಿತಿದ್ದರು. ಆದರೆ, ಹೋಟೆಲ್ ಒಳಗೆ ಹೋಗಲು ಅನುಮತಿ ನೀಡಿರಲಿಲ್ಲ. ಡಿ.ಕೆ.ಶಿವಕುಮಾರ್ ಅವರು ಪಟ್ಟು ಸಡಿಲಿಸಿರಲಿಲ್ಲ.
ಮಧ್ಯಾಹ್ನ 2.30ರ ಸುಮಾರಿಗೆ 150ಕ್ಕೂ ಹೆಚ್ಚು ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋದರು. ಇದರಿಂದಾಗಿ ಮುಂಬೈನ ರಿಸೈಸೆನ್ಸ್ ಹೋಟೆಲ್ ಮುಂದೆ ಬೆಳಗ್ಗೆಯಿಂದ ನಡೆಯುತ್ತಿದ್ದ ಹೈಡ್ರಾಮ ಮತ್ತೊಂದು ತಿರುವು ಪಡೆದುಕೊಂಡಿದೆ.
ಅತೃಪ್ತ ಶಾಸಕರನ್ನು ಭೇಟಿ ಮಾಡಲು ಡಿ.ಕೆ.ಶಿವಕುಮಾರ್ ಅವರು ರಿಸೈಸೆನ್ಸ್ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿಕೊಂಡು ತೆರಳಿದ್ದರು. ಆದರೆ, ಅವರ ರೂಂ ಬುಕ್ಕಿಂಗ್ ಕ್ಯಾನ್ಸಲ್ ಮಾಡಲಾಗಿತ್ತು. ಆದರೂ ಹೋಟೆಲ್ ಹೊರಗೆ ಅವರು ಕಾದು ಕುಳಿತಿದ್ದರು.

ಯಾರು-ಯಾರು ಇದ್ದರು?
ಅತೃಪ್ತ ಶಾಸಕರನ್ನು ಭೇಟಿ ಮಾಡಲು ಸಚಿವ ಜಿ.ಟಿ.ದೇವೇಗೌಡ, ಶ್ರವಣಬೆಳಗೊಳ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ, ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ರಿಸೈಸೆನ್ಸ್ ಹೋಟೆಲ್‌ಗೆ ತೆರಳಿದ್ದರು. ಆದರೆ, ಪೊಲೀಸರು ಯಾರನ್ನು ಒಳಗೆ ಬಿಟ್ಟಿಲ್ಲ.

ಅವಕಾಶವನ್ನು ನೀಡಲೇಬೇಕು
'ನಾನು ಗ್ರಾಹಕನಂತೆ ಹೋಟೆಲ್ ರೂಂ ಬುಕ್ ಮಾಡಿದ್ದೇನೆ. ಅವರು ನನಗೆ ಒಳಗೆ ಹೋಗಲು ಅವಕಾಶ ನೀಡಲೇಬೇಕು. ಅವರು ಕರೆಯುವ ತನಕ ನಾನು ಇಲ್ಲಿಯೇ ಕಾಯುತ್ತೇನೆ. ನಮ್ಮ ಬಗ್ಗೆ ಅನುಮಾನ ಇದ್ದರೆ ಪೊಲೀಸರು ನಮ್ಮ ಜೊತೆ ಬರಲಿ' ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.

ರೌಡಿಗಳನ್ನು ಕರೆದುಕೊಂಡು ಬಂದಿಲ್ಲ
ರಿಸೈಸೆನ್ಸ್ ಹೋಟೆಲ್ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 'ನನ್ನ ಭಯ ಬಿಜೆಪಿಯವರಿಗೂ ನಮ್ಮ ಶಾಸಕರಿಗೂ ಬೇಡ, ನಾನು ಯಾವ ರೌಡಿಯನ್ನು ಕರೆದುಕೊಂಡು ಬಂದಿಲ್ಲ. ನಮ್ಮ ಶಾಸಕರೊಂದಿಗೆ ಮಾತಕತೆ ನಡೆಸಲು ಬಂದಿದ್ದೇನೆ' ಎಂದು ಹೇಳಿದರು.

ನಮಗೆ ಅವರ ಬಗ್ಗೆ ಗೌರವವಿದೆ
ರಿಸೈಸೆನ್ಸ್ ಹೋಟೆಲ್‌ನಲ್ಲಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು, 'ಡಿ.ಕೆ.ಶಿವಕುಮಾರ್ ಬಗ್ಗೆನಮಗೆ ಗೌರವವಿದೆ. ಅವರು ನಮ್ಮ ರಾಜಕೀಯ ಗುರುಗಳು. ಆದರೆ, ಈಗಿನ ಪರಿಸ್ಥಿತಿ ಬೇರೆ ಇದೆ. ರಾಜಕಾರಣ ಬೇರೆ ವೈಯಕ್ತಿಕ ಸಂಬಂಧಗಳು ಬೇರೆ. ಅವರ ಜೊತೆ ನಾವು ಯಾವ ಮಾತುಕತೆ ಮಾಡಲ್ಲ' ಎಂದು ಸ್ಪಷ್ಟಪಡಿಸಿದ್ದರು.












Click it and Unblock the Notifications