ಡಿ ಗ್ಯಾಂಗ್ ಕೇಸ್: ಸಚಿವ ನವಾಬ್ ಮಲೀಕ್ ವಿಚಾರಣೆ ನಡೆಸಿದ 'ಇಡಿ'
ಮುಂಬೈ, ಫೆ.23: ಮನಿಲಾಂಡ್ರಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರು ಹಾಗೂ ಆಪ್ತರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ದಾವೂದ್ ಸೋದರಿ ಹಸೀನಾ ಪಾರ್ಕರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ತಂಡ ದಾಳಿ ನಡೆಸಿದ್ದರು. ಇಂದು ದಾವೂದ್ ಸೋದರ ಇಕ್ಬಾಲ್ ಕಸ್ಕರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವ ನವಾಬ್ ಮಲೀಕ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಮಂಗಳವಾರ ಮುಂಜಾನೆಯೇ ವಿಚಾರಣೆಗೆ ಹಾಜರಾಗಿರುವ ಮಲೀಕ್ ಬಳಿ ಕೆಲವು ಬ್ಯಾಂಕ್ ವ್ಯವಹಾರ, ಹಣ ವರ್ಗಾವಣೆ, ಆಸ್ತಿ ಡೀಲ್ ಬಗ್ಗೆ ಮಾಹಿತಿ ಕೇಳಲಾಗುತ್ತಿದೆ. ಈ ಹಿಂದೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಯು ರಾಜಕೀಯ ಪ್ರೇರಿತವಾಗಿದೆ ಎಂದು ನವಾಬ್ ಮಲೀಕ್ ಟೀಕಿಸಿದ್ದರು.
ಎನ್‌ಸಿಪಿ ಮುಖಂಡ ಸಚಿವ ನವಾಬ್ ಅವರು 1993 ರ ಬಾಂಬೆ ಬಾಂಬ್ ಸ್ಫೋಟದ ಅಪರಾಧಿ ಸರ್ದಾರ್ ಶಾವಾಲಿ ಖಾನ್ ಮತ್ತು ದಿವಂಗತ ಹಸೀನಾ ಪಾರ್ಕರ್, ದಾವೂದ್ ಗ್ಯಾಂಗಿನ ಮೊಹಮ್ಮದ್ ಸಲೀಂ ಇಶಾಕ್ ಪಟೇಲ್ ಅವರೊಂದಿಗೆ ಆಸ್ತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೇವೇಂದ್ರ ಫಡ್ನವಿಸ್ಆರೋಪಿಸಿದ್ದರು. ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ, ಬಿಜೆಪಿ ನಾಯಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದರು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಥಾಣೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇಕ್ಬಾಲ್ ಕಸ್ಕರ್ ನನ್ನು ತಮ್ಮ ವಶಕ್ಕೆ ಇಡಿ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಇಕ್ಬಾಲ್ ಕಸ್ಕರ್‌ನನ್ನು ಪಿಎಂಎಲ್ಎ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ವಿಚಾರಣೆಗೆ ಕರೆದೊಯ್ಯಲಾಗಿದೆ. ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ವಿಚಾರಣೆ ಜಾರಿಯಲ್ಲಿರುವಾಗಲೇ ನವಾಜ್ ಮಲೀಕ್ ವಿಚಾರಣೆಯನ್ನು ಇಡಿ ಅಧಿಕಾರಿಗಳು ಮುಂದುವರೆಸಿದ್ದಾರೆ.
ಭೂಗತ ಜಗತ್ತಿನ ಹಲವಾರು ಲಿಂಕ್‌ಗಳು, ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳೊಂದಿಗೆ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹುಡುಕಾಟ ನಡೆಸುತ್ತಿದೆ. ಈ ದಾಳಿಯಲ್ಲಿ ಹಸೀನಾ ಪಾರ್ಕರ್, ಇಕ್ಬಾಲ್ ಅವರ ಆಸ್ತಿಯೂ ಸೇರಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಭೂಗತ ಲೋಕಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಜಧಾನಿಯಲ್ಲಿ ಇಂತಹ ಹತ್ತು ಸ್ಥಳಗಳನ್ನು ಗುರುತಿಸಿದ್ದು, ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಇಡಿ ನಿರ್ಧರಿಸಿದೆ. ಇದಲ್ಲದೆ, ಈ ಪ್ರಕರಣದಲ್ಲಿ ಭೂಗತ ಜಗತ್ತಿನ ಕೆಲವು ರಹಸ್ಯ ವ್ಯವಹಾರಗಳಿಗೆ ಕೆಲವು ರಾಜಕೀಯ ಲಿಂಕ್‌ಗಳನ್ನು ಸಹ ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಮತ್ತು ಕೆಲವು ಸ್ವತಂತ್ರ ಗುಪ್ತಚರ ಮಾಹಿತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂಬೈನ ಹಲವಾರು ಆಸ್ತಿಗಳಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿರುವ ಮುಂಬೈನಲ್ಲಿರುವ ಆಸ್ತಿಗಳನ್ನು ಖರೀದಿಸಿರುವ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ, ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿತ್ತು. ಆದರೆ ವಿವಾದಿತ ಸೀಜೆ ಹೌಸ್ ಕಟ್ಟಡದ ಭೂ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಫುಲ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. 2004ರಿಂದ 2009ರ ಅವಧಿಯಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದರು.
2005ರಲ್ಲಿ ದಾವೂದ್ ಸಹಚರ ಇಕ್ಬಾಲ್ ಮಿರ್ಚಿ ಈ ಕಟ್ಟಡವನ್ನು ಪ್ರಫುಲ್ ಪಟೇಲ್ ಗೆ ಮಾರಿದ್ದಾನೆ. ಇಕ್ಬಾಲ್ ಪತ್ನಿ ಹಜ್ರಾ ಮೆಮೊನ್ ಹೆಸರಿನಲ್ಲಿದ್ದ ಮತ್ತೊಂದು ಆಸ್ತಿ ಕೂಡಾ ಪಟೇಲ್ ಪಾಲಾಗಿದೆ. ಈ ಕಟ್ಟಡಗಳ ಮಾಲೀಕತ್ವ ಪಡೆದ ಬಳಿಕ ಪುನರ್ ವಿನ್ಯಾಸಗೊಳಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.












Click it and Unblock the Notifications