Breaking: ಮುಂಬೈನಲ್ಲಿ ಶೇ.8.40ರಷ್ಟಾಯ್ತು ಕೊರೊನಾ ವೈರಸ್ ಪಾಸಿಟಿವಿಟಿ ದರ!
ಮುಂಬೈ, ಜೂನ್ 1: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಹೋಯ್ತು ಎನ್ನುವಷ್ಟರಲ್ಲೇ ವಾಣಿಜ್ಯ ನಗರಿಯಲ್ಲಿ ಅದೇ ಮಹಾಮಾರಿ ಮತ್ತಷ್ಟು ಆತಂಕವನ್ನು ಹೆಚ್ಚಿಸುತ್ತಿದೆ. ಮಂಗಳವಾರದ ತನಕ ಶೇ.06ರಷ್ಟಿದ್ದ ಕೋವಿಡ್-19 ಪಾಸಿಟಿವಿಟಿ ದರ ಬುಧವಾರವೊಂದೇ ದಿನಕ್ಕೆ ಶೇ.8.40ಕ್ಕೆ ಏರಿಕೆಯಾಗಿದೆ.
ಕೋವಿಡ್-19 ಪ್ರಾರಂಭದಿಂದಲೂ ಅತಿಹೆಚ್ಚು ಸವಾಲುಗಳನ್ನು ಎದುರಿಸಿದ ಮಹಾರಾಷ್ಟ್ರದಲ್ಲಿ ಇದೀಗ ಮತ್ತೊಮ್ಮೆ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 3475 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ.
ರಾಜ್ಯದಲ್ಲಿ ಪತ್ತೆ ಆಗಿರುವ ಒಟ್ಟು 3000ಕ್ಕೂ ಹೆಚ್ಚು ಪ್ರಕರಣಗಳಲ್ಲಿ 2500ಕ್ಕೂ ಹೆಚ್ಚು ಪ್ರಕರಣಗಳು ಮುಂಬೈ, ಪುಣೆ ಮತ್ತು ಠಾಣೆಯ ಕೆಲವು ಪ್ರದೇಶಗಳಲ್ಲೇ ವರದಿಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗುವುದಕ್ಕೆ ಕಾರಣವೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಮುಂಬೈನಲ್ಲಿ ಗರಿಷ್ಠ ಕೋವಿಡ್-19 ಪ್ರಕರಣ ವರದಿ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ಮುಂಬೈನಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಫೆಬ್ರವರಿ 1ರ ನಂತರದಲ್ಲಿ ಅತಿಹೆಚ್ಚು ಕೋವಿಡ್-19 ಸೋಂಕಿತ ಪ್ರಕರಣಗಳು ಬುಧವಾರ ನಗರದಲ್ಲಿ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 739 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಫೆಬ್ರವರಿ 1ರಂದು 803 ಪ್ರಕರಣಗಳು ವರದಿ ಆಗಿರುವುದೇ ಗರಿಷ್ಠ ಸಂಖ್ಯೆಯಾಗಿತ್ತು.

ಕೋವಿಡ್-19 ಪರೀಕ್ಷೆ ವೇಗ ಹೆಚ್ಚಿಸುವಂತೆ ಸಲಹೆ
ಮುಂಬೈನಲ್ಲಿ ತಕ್ಷಣವೇ ಸಮರೋಪಾದಿಯಲ್ಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೋವಿಡ್-19 ಸೋಂಕಿನ ಪರೀಕ್ಷೆಯ ವೇಗವನ್ನು ಹೆಚ್ಚಿಸಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. "ಮುಂಬೈನಲ್ಲಿ ದಿನನಿತ್ಯದ ಹೊಸ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಿದ್ದು, ನಾವು ಈಗ ರೋಗಲಕ್ಷಣದ ಪ್ರಕರಣಗಳಲ್ಲಿ ತ್ವರಿತ ಏರಿಕೆ ಕಾಣುತ್ತೇವೆ," ಎಂದು ನಾಗರಿಕ ಸಂಸ್ಥೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಥವಾ ಬಿಎಂಸಿ ಹೇಳಿದೆ.

ಕೊರೊನಾವೈರಸ್ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರು ಕಡಿಮೆ
ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಥಾಣೆಯ ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ. ಇಂದು 3,475 ಕೋವಿಡ್ ಪ್ರಕರಣಗಳಿದ್ದು ಅದರಲ್ಲಿ ಸುಮಾರು 2500 ಪ್ರಕರಣಗಳು ಮುಂಬೈನಲ್ಲೇ ವರದಿಯಾಗಿವೆ. ಆದರೆ, 2500 ಪ್ರಕರಣಗಳಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳು
ಕಳೆದ 24 ಗಂಟೆಗಳಲ್ಲಿ 2,784 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಕಳೆದೊಂದು ದಿನದಲ್ಲಿ ಕೊರೊನಾವೈರಸ್ ಮಹಾಮಾರಿಯಿಂದ 6 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದೇ ಅವಧಿಯಲ್ಲಿ 2,236 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 43,161,366ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಇದುವರೆಗೂ 42,617,810 ಸೋಂಕಿತರು ಗುಣಮುಖರಾಗಿದ್ದು, ಗುಣಮುಖರ ಶೇಕಡಾವಾರು ಪ್ರಮಾಣ ಶೇ.98.75ರಷ್ಟಿದೆ. ಅದೇ ರೀತಿ ಮಹಾಮಾರಿ ಕೋವಿಡ್-19 ಸೋಂಕಿಗೆ ದೇಶದಲ್ಲಿ ಇದುವರೆಗೂ 524,636 ಮಂದಿ ಪ್ರಾಣ ಬಿಟ್ಟಿದ್ದು, ಮೃತರ ಪ್ರಮಾಣ ಶೇ.1.22ರಷ್ಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 18,920 ಆಗಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.03ರಷ್ಟಿದೆ.












Click it and Unblock the Notifications