ಸಾಮ್ನಾದಲ್ಲಿ ಬಿಜೆಪಿಯನ್ನು ಮೊಘಲರಿಗೆ ಹೋಲಿಸಿದ ಶಿವಸೇನಾ
ಮುಂಬೈ, ನವೆಂಬರ್ 02: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಬಿಜೆಪಿ ಹಾಗೂ ಶಿವಸೇನಾ ನಡುವೆ ಸಿಎಂ ಪಟ್ಟಕ್ಕಾಗಿ ಕಿತ್ತಾಟ ಜೋರಾಗುತ್ತಿದೆ. ಉಭಯ ಪಕ್ಷಗಳ ನಾಯಕರ ವಾಕ್ಸಮರ ಹೆಚ್ಚಾಗುತ್ತಿದ್ದು, ಬಿಜೆಪಿ ಮುಖಂಡರ ಹೇಳಿಕೆಗೆ ಶಿವಸೇನಾ ತನ್ನ ಮುಖವಾಣಿ ಸಾಮ್ನಾ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದೆ.
ಬಿಜೆಪಿ ಸರ್ಕಾರದ ವಿತ್ತ ಸಚಿವ ಸುಧೀರ್ ಮುಂಗಾಂತಿವರ್ ಅವರು ಶುಕ್ರವಾರದಂದು 'ರಾಷ್ಟ್ರಪತಿ ಆಳ್ವಿಕೆ ಹೇರುತ್ತೇವೆ' ಎಂದು ಹಾಕಿದ ಬೆದರಿಕೆ ಮಾತನ್ನು ಶಿವಸೇನಾ ತೀವ್ರವಾಗಿ ಖಂಡಿಸಿದೆ. "ಇದು ರಾಜ್ಯ ಮತ್ತು ಜನರಿಗೆ ಮಾಡಿದ ಅವಮಾನವಾಗಿದ್ದು, ರಾಷ್ಟ್ರಪತಿಯವರೇನು ನಿಮ್ಮ ಜೇಬಿನಲ್ಲಿದ್ದಾರೆಯೇ?" ಎಂದು ಸಾಮ್ನಾದಲ್ಲಿ ಪ್ರಶ್ನಿಸಲಾಗಿದೆ.
"ನವೆಂಬರ್ 8ರಂದು ಈಗಿನ ಸರ್ಕಾರದ ಅವಧಿ ಮುಗಿಯುತ್ತದೆ. ನವೆಂಬರ್ 7ರೊಳಗೆ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಆಗದಿದ್ದರೆ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ" ಸುಧೀರ್ ಹೇಳಿದ್ದರು.
'ಸಾಮ್ನಾ' ಪತ್ರಿಕೆಯಲ್ಲಿ ಸುಧೀರ್ ಅವರ ಹೇಳಿಕೆ ಖಂಡಿಸಲಾಗಿದ್ದು, ಇದು ಅಸಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗಿದ್ದು, ನಿಮ್ಮ ನಿಯಂತ್ರಣದಲ್ಲಿರುವ ರಾಷ್ಟ್ರಪತಿ ಅಥವಾ ಬಿಜೆಪಿ ಕಚೇರಿಯಲ್ಲಿರುವ ರಾಷ್ಟ್ರಪತಿಗಳ ಸ್ಟ್ಯಾಂಪ್ ಎರಡರಲ್ಲಿ ಯಾವುದನ್ನು ಬಳಸುತ್ತೀರಾ? ಎಂದು ಪ್ರಶ್ನೆ ಮಾಡಲಾಗಿದೆ.

ರಾಷ್ಟ್ರಪತಿ ಆಳ್ವಿಕೆ ಬೆದರಿಕೆ ಹಾಕುವುದು
"ರಾಷ್ಟ್ರಪತಿ ಆಳ್ವಿಕೆ ಬೆದರಿಕೆ ಹಾಕುವುದು ಮೊಘಲ್ ರೀತಿಯ ದಬ್ಬಾಳಿಕೆಯಾಗಿದೆ, ಕಾನೂನು ಹಾಗೂ ಸಂವಿಧಾನ ಯಾರ ಅಡಿಯಾಳಾಗಿಲ್ಲ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಗೊಂದಲ ಮೂಡಿಸುತ್ತಿರುವವರು ಯಾರು ಎಂಬುದು ಜನರಿಗೆ ತಿಳಿದಿದೆ. ಬಹುತೇಕ ಸಿಗದಿದ್ದರೂ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಮಾಡಬೇಕು ಎನ್ನುತ್ತಿದ್ದಾರೆ" ಟೀಕೆ ಮಾಡಿದ್ದಾರೆ.

2019ರ ಚುನಾವಣೆ ಫಲಿತಾಂಶ
2014ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. 1995 ರಿಂದ 1999ರ ಸೇನಾ- ಬಿಜೆಪಿ ಸರ್ಕಾರದ ಮೇಲೆ ಸೇನಾದ ಬಾಳಾ ಠಾಕ್ರೆ ಹೇಗೆ ಹಿಡಿತ ಹೊಂದಿದ್ದರೋ ಅದೇ ರೀತಿ ಈ ಬಾರಿಯೂ ಹಿಡಿತ ಸಿಕ್ಕಿದೆ ಎಂದು ಘೋಷಿಸಿಕೊಂಡಿದೆ. 2014ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 122 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 105 ಸ್ಥಾನ ಗಳಿಸಿದೆ. 288 ವಿಧಾನಸಭಾ ಸ್ಥಾನಗಳುಳ್ಳ ಮಹಾರಾಷ್ಟ್ರದಲ್ಲಿ ಅಧಿಕಾರ ಸ್ಥಾಪಿಸಲು 146 ಸ್ಥಾನಗಳು ಅವಶ್ಯ. ಸೇನಾ ಕೂಡಾ 2014ರಲ್ಲಿ 63 ಸ್ಥಾನ ಗೆದ್ದಿತ್ತು. ಈ ಬಾರಿ 56 ಸ್ಥಾನ ಗೆದ್ದಿದೆ. ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.

ಚುನಾವಣಾ ಪೂರ್ವ ಮೈತ್ರಿಯ ಒಪ್ಪಂದ
ಚುನಾವಣಾ ಪೂರ್ವ ಮೈತ್ರಿಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಶ್ವಾಸನೆ ನೀಡಿದಂತೆ 50:50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಬೇಕು. ಅಧಿಕಾರ ಅವಧಿ ಸಮನಾಗಿ ಹಂಚಿಕೆಯಾಗಬೇಕು, ಉನ್ನತ ಸ್ಥಾನಗಳು ಸಿಗಬೇಕು, 2.5 ವರ್ಷ ಬಿಜೆಪಿಯಿಂದ ಸಿಎಂ ಹಾಗೂ 2.5 ವರ್ಷ ಶಿವಸೇನಾದಿಂದ ಸಿಎಂ ಎಂದು ಶಿವಸೇನಾ ತನ್ನ ಬೇಡಿಕೆ ಬಗ್ಗೆ ಲಿಖಿತ ಒಪ್ಪಂದವಾಗಬೇಕು ಎಂದು ಶಿವಸೇನಾ ಪಟ್ಟು ಹಿಡಿದಿದೆ. ಮುಖ್ಯಮಂತ್ರಿ ಸ್ಥಾನ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ಅನಗತ್ಯ, ಈ ಬಗ್ಗೆ ಯಾವುದೆ ಒಪ್ಪಂದವಾಗಿಲ್ಲ ಎಂದು ಬಿಜೆಪಿಯ ಸಿಎಂ ಅಭ್ಯರ್ಥಿ ದೇವೇಂದ್ರ ಫಡ್ನವೀಸ್ ಇಂದು ಸ್ಪಷ್ಟಪಡಿಸಿದ್ದಾರೆ.

ಸಂಜಯ್ ರಾವತ್ ಹೇಳಿಕೆ
"ಅಕಸ್ಮಾತ್ ಶಿವಸೇನೆ ಮನಸ್ಸು ಮಾಡಿದರೆ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸುವುದು ಕಷ್ಟವಿಲ್ಲ. ಆದರೆ ಜನರು ಕೊಟ್ಟಿರುವ ಜನಾದೇಶಕ್ಕೆ ವಿರುದ್ಧವಾಗಿ ಹೋಗಲು ನಾಯು ಇಷ್ಟಪಡುವುಸಿಲ್ಲ. ಬಿಜೆಪಿಗೆ ನಾವೇನು ಗಡುವು ನೀಡಿಲ್ಲ. 50:50 ಸೂತ್ರಕ್ಕೆ ಅವರು ಸಿದ್ಧವಿದ್ದರೆ ಈಗಲೇ ಸರ್ಕಾರ ರಚನೆಗೆ ನಮ್ಮ ಅಭ್ಯಂತರವಿಲ್ಲ" ಎಂದು ಸಂಜಯ್ ರಾವತ್ ಹೇಳಿದ್ದರು.











Click it and Unblock the Notifications