ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಪಟ್ಟಿಯಿಂದ ಪಂಕಜಾ ಮುಂಡೆ ಔಟ್
ಮುಂಬೈ ಜೂನ್ 9: ಮಹಾರಾಷ್ಟ್ರ ವಿಧಾನ ಪರಿಷತ್‌ನ ಹತ್ತು ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು(ಬಿಜೆಪಿ) ತನ್ನ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ಆಶ್ಚರ್ಯವೆಂಬಂತೆ ಮಾಜಿ ಸಚಿವೆ ಪಂಕಜಾ ಮುಂಡೆ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರ ಪುತ್ರಿಯಾದ ಪಂಕಜಾ ಮುಂಡೆ ಅವರ ಹೆಸರನ್ನು ವಿಧಾನ ಪರಿಷತ್‌ಗೆ ಬಿಜೆಪಿ ನಾಮಾಂಕಿತ ಮಾಡಲಿದೆ ಎಂಬ ಉಹಾಪೋಹಗಳು ಜೋರಾಗಿತ್ತು. ಆದರೆ ಈಗ ಎಲ್ಲಾ ಉಹಾಪೋಹಗಳಿಗೆ ಕೇಸರಿ ಪಕ್ಷ ತೆರೆ ಎಳೆದಿದೆ. ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಜೂನ್ 20 ರಂದು ನಡೆಯಲಿದೆ.
ವಿಧಾನ ಪರಿಷತ್ ಅಭ್ಯರ್ಥಿಗಳಾಗಿ ಪ್ರಸ್ತುತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಪ್ರವೀಣ್ ಯಶವಂತ್ ದಾರೆಕರ್, ಮಾಜಿ ಸಚಿವ ರಾಮ್ ಶಂಕರ್ ಶಿಂಧೆ, ಶ್ರೀಕಾಂತ್ ಭಾರತೀಯ, ಬಿಜೆಪಿಯ ರಾಜ್ಯ ಮಹಿಳಾ ಘಟಕದದ ಮುಖ್ಯಸ್ಥೆ ಉಮಾ ಗಿರೀಶ್ ಖಪ್ರೆ ಮತ್ತು ಪ್ರಸಾದ್ ಮಿನೇಶ್ ಲಾಡ್ ಅವರ ಹೆಸರುಗಳನ್ನು ಭಾರತೀಯ ಜನತಾ ಪಕ್ಷ ಪ್ರಕಟಿಸಿದೆ.

ವಿಧಾನಸಭೆಯಲ್ಲಿ ಬಿಜೆಪಿಯ 106 ಶಾಸಕರು
ವಿಧಾನ ಪರಿಷತ್ತಿನ ಹಾಲಿ ಅಧ್ಯಕ್ಷ ರಾಮರಾಜೇ ನಾಯ್ಕ್ ನಿಂಬಾಳ್ಕರ್, ರಾಜ್ಯ ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ, ಶಿವಸೇನೆ ನಾಯಕ ದಿವಾಕರ್ ರಾವುಟೆ , ಲೋಪಿ ದಾರೆಕರ್, ಪ್ರಸಾದ್ ಲಾಡ್, ಮರಾಠ ನಾಯಕ ವಿನಾಯಕ್ ಮೇಟೆ ಮತ್ತು ಮಾಜಿ ಸಚಿವ ಸದಾಭಾವು ಖೋಟ್ ಅವರ ನಿವೃತ್ತಿ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನ ಹತ್ತು ಸ್ಥಾನಗಳು ತೆರವಾಗಲಿದೆ.
ವಿಧಾನಸಭೆಯ ಶಾಸಕರು ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. 288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಯ 106 ಶಾಸಕರಿದ್ದಾರೆ. ಈ ಸಂಖ್ಯಾ ಬಲದಿಂದ ನಾಲ್ವರು ಅಭ್ಯರ್ಥಿಗಳನ್ನು ಅನಾಯಾಸವಾಗಿ ವಿಧಾನ ಪರಿಷತ್ ಗೆ ಬಿಜೆಪಿ ಕಳುಹಿಸಬಹುದಾಗಿದೆ.

ಸಚಿವರಾಗಿ ಕಾರ್ಯ ನಿರ್ವಹಣೆ
ಮಹಾರಾಷ್ಟ್ರದ ರಾಜಕೀಯ ಕುಟುಂಬಕ್ಕೆ ಸೇರಿರುವ ಪಂಕಜಾ ಮುಂಡೆ, ಬಿಜೆಪಿ ಯೊಂದಿಗಿನ ಮುನಿಸಿನಿಂದ ಈ ಹಿಂದೆ ಸುದ್ದಿಯಲ್ಲಿದ್ದರು.
ಪಂಕಜಾ ಮುಂಡೆ ಅವರ ತಂದೆ ಗೋಪಿನಾಥ್ ಮುಂಡೆ 1990 ರ ದಶಕದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಪಂಕಜಾ ಮುಂಡೆ ಅವರು ದೇವೇಂದ್ರ ಫಡ್ನವಿಸ್ ಸಂಪುಟದಲ್ಲಿ ಗ್ರಾಮೀಣಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದರು. ಸಕ್ಕರೆ ಕಾರ್ಖಾನೆ ಮತ್ತು ಬ್ಯಾಂಕ್ ವಲಯದಲ್ಲಿ ಉದ್ಯಮಿಯಾಗಿ ಇವರು ಗುರುತಿಸಿಕೊಂಡಿದ್ದಾರೆ.

ಚಿಕ್ಕಿ ಗುತ್ತಿಗೆಯಲ್ಲಿ ಭ್ರಷ್ಟಾಚಾರ ಆರೋಪ
2012 ರಲ್ಲಿ ಪಂಕಜಾ ಮುಂಡೆ ಅವರು ಬಿಜೆಪಿಯ ಯುವ ಘಟಕ, ಭಾರತೀಯ ಜನತಾ ಯುವ ಮೋರ್ಚಾ ದ ರಾಜ್ಯಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 2009 ರಲ್ಲಿ ಅವರು ಪರ್ಲಿ ಕ್ಷೇತ್ರದಿಂದ ಮಹಾರಾಷ್ಟ್ರದ ವಿಧಾನಸಭೆಗೆ ಆಯ್ಕೆಯಾದರು. 2014 ರಲ್ಲಿ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಖಾತೆ ನೀಡಲಾಗಿತ್ತು. 2015ರಲ್ಲಿ ಇವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಟೆಂಡರ್ ಕರೆಯದೇ ಮಕ್ಕಳಿಗೆ ವಿತರಿಸುವ ಚಿಕ್ಕಿಗೆ ಪಂಕಜಾ ಮುಂಡೆ ಅವರು ಗುತ್ತಿಗೆ ನೀಡಿದ್ದಾರೆ. ಈ ಸಂಬಂಧ 206 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಪಕ್ಷದಲ್ಲಿ ಸಕ್ರೀಯವಾಗಿದ್ದ ಪಂಕಜಾ ಮುಂಡೆ
ಆದರೆ ವಿಚಾರಣೆ ನಂತರ ಮಹಾರಾಷ್ಟ್ರದ ಭಷ್ಟಾಚಾರ ನಿಗ್ರಹ ದಳ ಈ ಪ್ರಕರಣದಲ್ಲಿ ಪಂಕಜಾ ಮುಂಡೆ ಅವರಿಗೆ ಕ್ಲೀನ್ ಚಿಟ್ ನೀಡಿತು. ನ್ಯಾಯಾಲಯದ ಆದೇಶದಂತೆಯೇ ಚಿಕ್ಕಿ ವಿತರಣೆಗೆ ಗುತ್ತಿಗೆ ನೀಡಲಾಗಿದೆ ಎಂದು ಅದು ಉಲ್ಲೇಖಿಸಿತ್ತು. ನಂತರದ ಈ ವರ್ಷದ ಆರಂಭದಲ್ಲಿ ನಗರ ಪಂಚಾಯಿತಿ ಚುನಾವಣೆಯಲ್ಲಿ ಬೀಡ್ ಜಿಲ್ಲೆಯಲ್ಲಿ ಎಲ್ಲಾ ನಾಲ್ಕು ನಗರ ಪಂಚಾಯಿತಿಗಳನ್ನು ಬಿಜೆಪಿ ತೆಕ್ಕೆಗೆ ಪಡೆಯುವಲ್ಲಿ ಪಂಕಜಾ ಮುಂಡೆ ಶ್ರಮಿಸಿದ್ದರು. ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಇವರಿಗೆ ಪರಿಷತ್ ಚುನಾವಣೆ ಟಿಕೆಟ್ ದೊರೆಯಲಿ ಎಂಬ ನಿರೀಕ್ಷೆ ಇತ್ತು.












Click it and Unblock the Notifications