ಆರ್ಯನ್ ಖಾನ್‌ಗೆ ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ
ಮುಂಬೈ ಅಕ್ಟೋಬರ್ 29: ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇನ್ನೂ ಒಂದು ರಾತ್ರಿಯನ್ನು ಕಳೆಯಲಿದ್ದಾರೆ ಎಂದು ಹಿರಿಯ ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಾವು ಯಾರಿಗೂ ವಿಶೇಷ ಪ್ರಾಶಸ್ತ್ಯ ನೀಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಜಾಮೀನು ಪತ್ರಗಳನ್ನು ಸ್ವೀಕರಿಸುವ ಸಮಯ ಸಂಜೆ 5.30 ರವೆರೆಗೆ ಇದೆ. ಆದರೆ ಆ ಸಮಯ ಮುಗಿದು ಹೋಗಿದೆ. ಇಂದು ಅವರನ್ನು ಬಿಡುಗಡೆ ಮಾಡಲಾಗುವುದಿಲ್ಲ"ಎಂದು ಜೈಲಾಧಿಕಾರಿ ತಿಳಿಸಿದ್ದಾರೆ. ಆರ್ಯನ್ ಅವರ ಕಾನೂನು ತಂಡದಿಂದ ಜಾಮೀನು ಅರ್ಜಿ ಸೇರುವುದು ಸಂಜೆ 7 ರವರೆಗೆ ಆಗಲಿದೆ ಎಂಬ ಸೂಚನೆಗಳು ಇದ್ದಾಗಲೂ ಜೈಲು ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ.
ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಗುರುವಾರ ಆರ್ಯನ್‌ಗೆ ಬಾಂಬೆ ಹೈಕೋರ್ಟ್ 14 ಜಾಮೀನು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು, ಅದರಂತೆ ಇಂದು ಅವರು ಬಿಡುಗಡೆಯಾಗಬೇಕಿತ್ತು. ಆದರೆ ಜಾಮೀನು ಪತ್ರಗಳನ್ನು ಸ್ವೀಕರಿಸುವ ಸಮಯ ಮುಗಿದಿದ್ದರಿಂದ ಇಂದು ಬಿಡುಗಡೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಷರತ್ತುಬದ್ಧ ಜಾಮೀನು
ಐದು ಪುಟಗಳ ಆದೇಶದಲ್ಲಿ ಜಾಮೀನು ಪಡೆದಿರುವ ಆರ್ಯನ್ ಖಾನ್ ಮತ್ತು ಅವರ ಇಬ್ಬರು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರನ್ನು ತಲಾ ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್‌ನಲ್ಲಿ ಇಬ್ಬರ ಶ್ಯೂರಿಟಿಯೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ ನಿಗದಿಪಡಿಸಿದ ಷರತ್ತುಗಳ ಪ್ರಕಾರ, ಮೂವರು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಮತ್ತು ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆಯದೆ ಭಾರತವನ್ನು ತೊರೆಯಬಾರದು ಮತ್ತು ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು.

ಇಂದು ಆರ್ಯನ್‌ಗೆ ಜೈಲೇ ಗತಿ
ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ ದಾಳಿಯ ವೇಳೆ ಬಂಧಿಸಲ್ಪಟ್ಟ 25 ದಿನಗಳ ನಂತರ ಆರ್ಯನ್ ಖಾನ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. HC ಆದೇಶದ ಆಪರೇಟಿವ್ ಭಾಗದ ಪ್ರಮಾಣೀಕೃತ ನಕಲನ್ನು ಈಗ ಆರ್ಯನ್ ಖಾನ್ ಅವರ ವಕೀಲರು ವಿಶೇಷ ನ್ಯಾಯಾಲಯಕ್ಕೆ ಕೊಂಡೊಯ್ಯಬೇಕು. ಅಗತ್ಯ ದಾಖಲೆಗಳು ಮತ್ತು ಶ್ಯೂರಿಟಿಗಳೊಂದಿಗೆ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ (NDPS) ಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ಮಾಡಲು ಗೊತ್ತುಪಡಿಸಲಾಗಿದೆ. ವಿಶೇಷ ನ್ಯಾಯಾಲಯವು ಪರಿಶೀಲನೆಯ ನಂತರ ಬಿಡುಗಡೆ ಪತ್ರಗಳನ್ನು ನೀಡಲಿದ್ದು, ನಂತರ ಅದನ್ನು ಜೈಲಿಗೆ ಸಲ್ಲಿಸಲಾಗುವುದು. ಆದರೆ ಇದು ತಡವಾಗಿದ್ದರಿಂದ ಆರ್ಯನ್ ಇಂದು ಜೈಲುವಾಸ ಅನುಭವಿಸಬೇಕಾಗಿದೆ.
ಅದೇ ಷರತ್ತುಗಳು ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾಗೆ ಅನ್ವಯಿಸುತ್ತವೆ. ಜೊತೆಗೆ ಮೂವರೂ ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಎನ್‌ಸಿಬಿ "ತಮ್ಮ ಜಾಮೀನು ರದ್ದುಗೊಳಿಸಲು ವಿಶೇಷ ನ್ಯಾಯಾಧೀಶರು /ನ್ಯಾಯಾಲಯಕ್ಕೆ ನೇರವಾಗಿ ಅರ್ಜಿ ಸಲ್ಲಿಸುತ್ತದೆ" ಎಂದು ನ್ಯಾಯಾಲಯ ಹೇಳಿದೆ. "ಪ್ರತಿಯೊಬ್ಬ ಅರ್ಜಿದಾರರು/ಆರೋಪಿಗಳು ಅಂತಹ ಮೊತ್ತದಲ್ಲಿ ಒಂದು ಅಥವಾ ಹೆಚ್ಚಿನ ಶ್ಯೂರಿಟಿಗಳೊಂದಿಗೆ ರೂ 1 ಲಕ್ಷದ ವೈಯಕ್ತಿಕ ಬಾಂಡ್ ಅನ್ನು ಕಾರ್ಯಗತಗೊಳಿಸಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೂಲ ಸಾಕ್ಷಿಗಳೊಂದಿಗೆ ಇಲ್ಲ ಸಂಪರ್ಕ
ಆರೋಪಿಯು ವೈಯಕ್ತಿಕವಾಗಿ ಅಥವಾ ಯಾರ ಮೂಲಕವೂ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಥವಾ ಸಾಕ್ಷ್ಯವನ್ನು ಹಾಳುಮಾಡಲು ಯಾವುದೇ ಪ್ರಯತ್ನ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ. ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ಮತ್ತು ವಿಶೇಷ ನ್ಯಾಯಾಲಯದ ಅನುಮತಿಯನ್ನು ಪಡೆಯದೆ ಭಾರತವನ್ನು ತೊರೆಯಬಾರದು ಎಂದು ಉಚ್ಚ ನ್ಯಾಯಾಲಯವು ಮೂವರಿಗೆ ಸೂಚಿಸಿದೆ. ಆರೋಪಿಗಳು ಮುಂಬೈನಿಂದ ಹೊರಡುವ ಮೊದಲು ಎನ್ಸಿಬಿಗೆ ಪೂರ್ವ ಮಾಹಿತಿ ನೀಡಬೇಕು ಮತ್ತು ಅವರ ಪ್ರಯಾಣದ ವಿವರವನ್ನು ಒದಗಿಸಬೇಕು.ಆರ್ಯನ್ ಖಾನ್, ಮರ್ಚೆಂಟ್ ಮತ್ತು ಧಮೇಚಾ ಅವರು ಎನ್‌ಡಿಪಿಎಸ್ ಕಾಯಿದೆಯಡಿ ಅಪರಾಧಗಳಿಗಾಗಿ ಪ್ರಸ್ತುತ ಪ್ರಕರಣವನ್ನು ದಾಖಲಿಸಿರುವ ಆಧಾರದ ಮೇಲೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಕೋರ್ಟ್ ತಿಳಿಸಿದೆ. ಜೊತೆಗೆ ಈ ಮೂವರೂ ಪ್ರಕರಣದಲ್ಲಿ ಯಾವುದೇ ಸಹ-ಆರೋಪಿಗಳೊಂದಿಗೆ ಅಥವಾ ಅಂತಹುದೇ ಚಟುವಟಿಕೆಗಳಲ್ಲಿ ತೊಡಗಿರುವ ಯಾರೊಂದಿಗೂ ಯಾವುದೇ ಸಂಪರ್ಕವನ್ನು ಹೊಂದಬಾರದು ಎಂದು ಹೈಕೋರ್ಟ್ ಹೇಳಿದೆ.

ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು
ಮೂವರು ತಮ್ಮ ಉಪಸ್ಥಿತಿಯನ್ನು ಗುರುತಿಸಲು ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು. ಒಮ್ಮೆ ವಿಚಾರಣೆ ಪ್ರಾರಂಭವಾದರೆ, ಅರ್ಜಿದಾರರು/ಆರೋಪಿಗಳು ಯಾವುದೇ ರೀತಿಯಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಲು ಪ್ರಯತ್ನಿಸಬಾರದು ಎಂದು ನ್ಯಾಯಾಲಯ ಹೇಳಿದೆ.
ಸದ್ಯ ಆರ್ಯನ್ ಖಾನ್ ಮತ್ತು ಮರ್ಚೆಂಟ್ ಆರ್ಥರ್ ರೋಡ್ ಜೈಲಿನಲ್ಲಿದ್ದರೆ, ಧಮೇಚಾ ಬೈಕುಲ್ಲಾ ಮಹಿಳಾ ಜೈಲಿನಲ್ಲಿದ್ದಾರೆ.ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಕ್ಟೋಬರ್ 3 ರಂದು ಬಂಧಿಸಿದೆ. ಇವರ ಮೇಲೆ ನಿಷೇಧಿತ ಡ್ರಗ್ಸ್ ಹೊಂದಿರುವ, ಸೇವನೆ, ಮಾರಾಟ/ಖರೀದಿ ಮತ್ತು ಪಿತೂರಿ ಮತ್ತು ಕುಮ್ಮಕ್ಕುಗಳಿಗಾಗಿ ಎನ್‌ಡಿಪಿಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.