13 ಶಾಸಕರು ಎಸ್‌ಪಿ ಸೇರ್ಪಡೆ ಆಗಲಿದ್ದಾರೆ ಎಂದ ಶರದ್ ಪವಾರ್!
ಲಕ್ನೋ, ಜನವರಿ 11: ಉತ್ತರ ಪ್ರದೇಶದ ಹದಿಮೂರು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ. ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸಂಸತ್ತು ಮತ್ತು ಆಡಳಿತಾರೂಢ ಬಿಜೆಪಿಗೆ ರಾಜೀನಾಮೆ ನೀಡಿ ಮಂಗಳವಾರ ಸಮಾಜವಾದಿ ಪಕ್ಷಕ್ಕೆ ಸೇರಿದ ನಂತರ ಈ ಹೇಳಿಕೆಯನ್ನು ಶರದ್ ಪವಾರ್ ನೀಡಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ಎಸ್‌ಪಿ ಸೇರ್ಪಡೆ ಬೆನ್ನಲ್ಲೇ ಉತ್ತರ ಪ್ರದೇಶದ ಇತರ ಮೂವರು ಬಿಜೆಪಿ ಶಾಸಕರು ಮಂಗಳವಾರ ಪಕ್ಷ ತೊರೆದಿದ್ದಾರೆ. ಈ ಬಗ್ಗೆ ಮುಂಬೈನಲ್ಲಿ ಪ್ರತಿಕ್ರಿಯೆ ನೀಡಿದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, "ಉತ್ತರ ಪ್ರದೇಶದಲ್ಲಿ ನಾವು ಸಮಾಜವಾದಿ ಪಕ್ಷ ಮತ್ತು ಇತರ ಸಣ್ಣ ಪಕ್ಷಗಳೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ," ಎಂದು ಹೇಳಿರುವುದು ಮಾತ್ರವಲ್ಲದೇ ಉತ್ತರ ಪ್ರದೇಶದ ಹದಿಮೂರು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದಿದ್ದಾರೆ.
ಬಿಜೆಪಿ ಕಚೇರಿಗೆ ಬೀಗ ಕಳುಹಿಸಿದ ಎಸ್‌ಪಿ ನಾಯಕ!
"ಉತ್ತರ ಪ್ರದೇಶದ ಜನರು ಬದಲಾವಣೆಗಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಖಂಡಿತಾ ಕಾಣುತ್ತೇವೆ, ವಿಧಾನಸಭೆ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಕೋಮು ಧ್ರುವೀಕರಣ ಮಾಡಲಾಗುತ್ತಿದೆ. ಇದಕ್ಕೆ ಉತ್ತರ ಪ್ರದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ," ಶರದ್ ಪವಾರ್ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಎನ್‌ಸಿಪಿ ನಾಯಕ ಶರದ್ ಪವಾರ್, "ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಟಿಎಂಸಿ ಜೊತೆ ಮೈತ್ರಿ ಮಾಡಿಕೊಳ್ಳಲು ತಮ್ಮ ಪಕ್ಷವು ಮಾತುಕತೆ ನಡೆಸುತ್ತಿದೆ," ಎಂದಿದ್ದಾರೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ನಾವು ಸಮಾಜವಾದಿ ಪಕ್ಷ ಮತ್ತು ಇತರ ಸಣ್ಣ ಪಕ್ಷಗಳೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಮಾಯಾವತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸತೀಶ್ಚಂದ್ರ
ಬಿಜೆಪಿ ತೊರೆದ ಉತ್ತರ ಪ್ರದೇಶದ ಶಾಸಕರು
ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ಸಂಪುಟ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿದ ನಂತರ, ರಾಜ್ಯದ ಇತರ ಮೂವರು ಬಿಜೆಪಿ ಶಾಸಕರು ಕೂಡಾ ಪಕ್ಷವನ್ನು ತೊರೆದಿದ್ದಾರೆ. ಇದರಲ್ಲಿ ತಿಲ್ಹಾರ್ ಶಾಸಕ ರೋಷನ್ ಲಾಲ್ ವರ್ಮಾ, ಬಿಲ್ಹೌರ್ ಶಾಸಕ ಭಗವತಿ ಪ್ರಸಾದ್ ಸಾಗರ್ ಮತ್ತು ತಿಂದವಾರಿ ಶಾಸಕ ಬ್ರಜೇಶ್ ಪ್ರಜಾಪತಿ ಸೇರಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರಂತೆ, ರೋಷನ್ ಲಾಲ್ ವರ್ಮಾ ಕೂಡ ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ.
ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ದಲಿತರು, ರೈತರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಮತ್ತು ನಿರುದ್ಯೋಗಿ ಯುವಕರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ತಮ್ಮ ಪತ್ರದಲ್ಲಿ ಆರೋಪ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)