ಸಿದ್ಧಾರ್ಥ್ ಜಿಗಿದಿದ್ದ ಅದೇ ನೇತ್ರಾವತಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನ
ಮಂಗಳೂರು, ಆಗಸ್ಟ್ 4: ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಘಟನೆ ಮಾಸುವ ಮುನ್ನವೇ ಆತ್ಮಹತ್ಯೆ ಯತ್ನವೊಂದು ಮಂಗಳೂರು ಹೊರಲವಯದ ನೇತ್ರಾವತಿ ಸೇತುವೆ ಮೇಲೆ ನಡೆದಿದೆ. ಭಾನುವಾರ ಸಂಜೆ ವ್ಯಕ್ತಿಯೊಬ್ಬರು ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಾರಿದ ಬಳಿಕ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿ, ದಡದತ್ತ ಈಜಿಕೊಂಡು ಬಂದಿದ್ದು, ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಎಂದು ಗುರುತಿಸಲಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಿರೀಶ್ ಅವರು ನಗರದ ಉರ್ವ ಸ್ಟೋರ್ ನಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಅವರ ಪತ್ನಿ ನಗರದ ಕೋರ್ಟ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಗಿರೀಶ್ ಅವರು ಪತ್ನಿ, ಮಗುವಿನೊಂದಿಗೆ ಉರ್ವ ಪಿಡಬ್ಲ್ಯುಡಿ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದಾರೆ. ಭಾನುವಾರ ಸಂಜೆ ನಗರದಿಂದ ಉಳ್ಳಾಲ ಕಡೆಗೆ ತೆರಳಿದ ಗಿರೀಶ್, ಸೇತುವೆಯಿಂದ ನೇತ್ರಾವತಿ ನದಿ ನೀರಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಆದರೆ, ನೀರಿಗೆ ಜಿಗಿದ ಬಳಿಕ ಪತ್ನಿ, ಮಗುವಿನ ನೆನಪಾಗಿ, ಈಜಿ ದಡ ಸೇರುವ ಪ್ರಯತ್ನ ಮಾಡಿದ್ದಾರೆ. ಗಿರೀಶ್ ನದಿಗೆ ಹಾರಿದ್ದನ್ನು ತೊಕ್ಕೊಟ್ಟು ಕಡೆಯಿಂದ ಬರುವವರು ನೋಡಿದ್ದು, ವಾಹನ ನಿಲ್ಲಿಸಿ ನದಿಯತ್ತ ನೋಡಿದ್ದಾರೆ. ಈ ಸಂದರ್ಭದಲ್ಲಿ ಗಿರೀಶ್ ನೀರಿನಲ್ಲಿ ಈಜಿಕೊಂಡು ದಡದತ್ತ ಬರುವುದನ್ನು ಗಮನಿಸಿ, ಕೂಡಲೇ ತೆರಳಿ ಅವರನ್ನು ರಕ್ಷಣೆ ಮಾಡಿದ್ದಾರೆ.
ಅ ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಘಟನೆ ಬಳಿಕ ನೇತ್ರಾವತಿ ಸೇತುವೆ ಮೇಲೆ ಪೊಲೀಸ್ ಪ್ಯಾಟ್ರೋಲಿಂಗ್ ಗೆ ಕ್ರಮ ಕೈಗೊಳ್ಳಲಾಗಿದೆ.











Click it and Unblock the Notifications