ಸರ್ಕಾರಿ ಅಧಿಸೂಚನೆಗಳು ಹಿಂದಿಯಲ್ಲಿ ಬರಲಿ
ಮಂಗಳೂರು, ಮಾ. 29 : ಶಕ್ತಿಯುತ ದೇಶ ನಿರ್ಮಾಣಕ್ಕಾಗಿ ಮಾತೃ ಭಾಷೆಯನ್ನು ಬಲಗೊಳಿಸುವುದು ಅಗತ್ಯ. ಭಾಷೆ ಬಲಿಷ್ಠವಾದರೆ ದೇಶ ಬಲಿಷ್ಠವಾಗುತ್ತದೆ. ಇತರ ಭಾಷೆಗಳಿಗೆ ಗೌರವ ನೀಡುವುದರ ಜತೆಗೆ ಹಿಂದಿ ಭಾಷೆಯನ್ನು ಸಶಕ್ತಗೊಳಿಸಲು ನಾವೆಲ್ಲರೂ ಕೈಜೋಡಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.
ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಅಧಿಕೃತ ಭಾಷಾ ಅನುಷ್ಠಾನ ಸಮಿತಿ ಮತ್ತು ಪ್ರಾದೇಶಿಕ ಅನುಷ್ಠಾನ ಕಚೇರಿ (ದಕ್ಷಿಣ ಮತ್ತು ನೈಋತ್ಯ) ವತಿಯಿಂದ ಹಮ್ಮಿಕೊಂಡಿದ್ದ ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು. [ಹಿಂದಿವಾದಿ ವಜುಭಾಯಿ ವಿರುದ್ಧ ಕರವೇ ಪ್ರತಿಭಟನೆ]

ಇತರ ರಾಜ್ಯದ ಭಾಷೆಗಳನ್ನು ಗೌರವಿಸಬೇಕು. ಎಲ್ಲ ಭಾಷೆಗಳ ಉತ್ಕೃಷ್ಟ ಜ್ಞಾನಗಳನ್ನು ದೇಶಾದ್ಯಂತ ಜೋಡಿಸಲು ದೇಶದ ಮಾತೃ ಭಾಷೆಗೆ ಸಾಧ್ಯವಿದೆ. ಇದಕ್ಕೆ ಪೂರಕವಾಗಿ ಹಿಂದಿ ಭಾಷೆಯ ಪ್ರಚಾರ, ಪ್ರಸಾರ ಇನ್ನಷ್ಟು ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]
ಹಿಂದಿಯಲ್ಲಿ ಮೂಡಿ ಬರಲಿ : ಸರ್ಕಾರಿ ಅಧಿಸೂಚನೆಗಳು ಇಂಗ್ಲಿಷ್‌ನಲ್ಲಿ ಬಂದ ಕಾರಣ ಇಂಗ್ಲಿಷ್ ಭಾಷೆ ಹೆಚ್ಚು ಪ್ರಸಾರ ಕಂಡಿತು. ಇನ್ನು ಮುಂದೆ ಅಧಿಸೂಚನೆ ಹಾಗೂ ಕಾನೂನುಗಳನ್ನು ಹಿಂದಿಯಲ್ಲಿ ತರುವ ಮೂಲಕ ಹಿಂದಿ ಭಾಷೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ ಆಗಬೇಕು ಎಂದರು.
ಏಕತೆ ಸಂಕೇತ : ದೇಶಕ್ಕೆ ಸ್ವತಂತ್ರವಾದ ಧ್ವಜ, ಚಿಹ್ನೆ, ಪಶು, ಪಕ್ಷಿ ಇದ್ದ ಹಾಗೆ ರಾಷ್ಟ್ರಭಾಷೆ ಹಿಂದಿಯಾಗಿದೆ. ಯಾವುದೇ ಭಾಷೆಗಿಂತಲೂ ವಿಶೇಷವಾಗಿ ಇಂಗ್ಲಿಷ್‌ಗಿಂತಲೂ ಹಿಂದಿಯನ್ನು ಅಪ್ಯಾಯಮಾನವಾಗಿ ಕಲಿಯುವ ಮನೋಭಾವ ಹಾಗೂ ಅಪೇಕ್ಷೆ ನಮ್ಮಲ್ಲಿ ಮೂಡಿಬರಬೇಕು ಎಂದು ಹೇಳಿದರು.
ನಾನಾ ಭಾಷೆ-ವೇಷ : ನಮ್ಮಲ್ಲಿ ನಾನಾ ಭಾಷೆ, ನಾನಾ ವೇಷಭೂಷಣಗಳಿವೆ. ಆದರೆ ದೇಶ ಮಾತ್ರ ಒಂದೇ. ವ್ಯಕ್ತಿ, ಗ್ರಾಮ, ರಾಜ್ಯ, ರಾಷ್ಟ್ರ ಬಲಶಾಲಿಯಾಗಬೇಕಾದರೆ, ಆಯಾ ಭಾಷೆಗಳು ಬಲಗೊಳ್ಳಬೇಕು. ಇದರ ಮೂಲಕ ದೇಶದ ಭಾಷೆಯನ್ನು ಬಲಿಷ್ಠಗೊಳಿಸುವುದಕ್ಕೆ ನಾವು ಶ್ರಮಿಸಬೇಕು ಎಂದು ಅವರು ಹೇಳಿದರು.
ಸಿನೆಮಾ, ಸೀರಿಯಲ್ ನೋಡಿ : ಹಿಂದಿ ಸಿನೆಮಾ, ಸೀರಿಯಲ್ ನೋಡುವುದರಿಂದ ಹಿಂದಿ ಭಾಷಾ ಪ್ರಸಾರ ಹೆಚ್ಚುತ್ತದೆ. ದೇಶದ ಶೇ.75ರಷ್ಟು ಮಂದಿಗೆ ಹಿಂದಿ ಭಾಷೆ ಮಾತನಾಡಲು, ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಇದರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಕರೆ ನೀಡಿದರು.












Click it and Unblock the Notifications