ಯಮಸ್ವರೂಪಿಯಾಗಿ ಬಂದ ಟಿಪ್ಪರ್: ಮಂಗಳೂರಲ್ಲಿ ಅಪಘಾತಕ್ಕೆ ಮಹಿಳೆ ಬಲಿ
ಮಂಗಳೂರು, ನವೆಂಬರ್ 28: ಟಿಪ್ಪರ್ವೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ನವೆಂಬರ್ 27ರಂದು ಬುಧವಾರ ನಗರದ ಕುಂಟಿಕಾನ ಬಳಿ ನಡೆದಿದೆ.
ಪಂಜಿಮೊಗರು ನಿವಾಸಿ ಯೋಗೇಶ್ ಎಂಬವರ ಪತ್ನಿ ಪ್ರಿಯಾ ಸುವರ್ಣ (43) ಮೃತಪಟ್ಟವರು. ಪ್ರಿಯಾ ಅವರು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯಿಂದ ನಗರದ ಕೆಪಿಟಿ ಕಡೆಗೆ ತೆರಳುತ್ತಿದ್ದ ವೇಳೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರಿಯಾ ರಸ್ತೆ ಮೇಲೆ ಬಿದ್ದರು. ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರವಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಪ್ರಿಯಾ ಇಬ್ಬರು ಮಕ್ಕಳು ಹಾಗೂ ಪತಿಯನ್ನು ಅಗಲಿದ್ದಾರೆ. ಈ ಕುರಿತು ಮಂಗಳೂರು ನಗರ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications