ಕಾಂಗ್ರೆಸ್ ಊರಿಗೆ ಮನುಷ್ಯನೂ ಅಲ್ಲ, ಸ್ಮಶಾನಕ್ಕೆ ಹೆಣವೂ ಅಲ್ಲ; ಸಚಿವ ಆರ್ ಅಶೋಕ್
ಮಂಗಳೂರು, ಫೆಬ್ರವರಿ 19: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯು ಊರಿಗೆ ಮನುಷ್ಯನಲ್ಲ ಸ್ಮಶಾನಕ್ಕೆ ಹೆಣವೂ ಅಲ್ಲ ಎನ್ನುವಂತಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಧಾನಸಭಾ ಅಧಿವೇಶನದಲ್ಲಿ ಹಿಜಾಬ್ ವಿಚಾರ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಪರವಾಗಿ ಇದೆ ಎಂದು ಹೇಳಲು ಡಿ.ಕೆ.ಶಿವಕುಮಾರ್ ಬಿಡುತ್ತಿಲ್ಲ. ನಾವು ಹಿಂದೂ ಪರವಾಗಿದ್ದೇವೆ ಎಂದು ಹೇಳಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಇದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಫೈಟ್ ಅಷ್ಟೇ. ವಿಧಾನಸಭೆಯಲ್ಲಿ ಹಿಜಾಬ್ ಕೇಸರಿ ಶಾಲು ವಿವಾದದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಸಚಿವ ಆರ್ ಅಶೋಕ್ ಪ್ರಶ್ನೆ ಮಾಡಿದರು.
ವಿಧಾನಸಭಾ ಅಧಿವೇಶದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಈಶ್ವರಪ್ಪ ರಾಷ್ಟ್ರದ ಸಾರ್ವಭೌಮತ್ವದ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬುದು ಕಾಂಗ್ರೆಸ್ ಆರೋಪವಾಗಿದ್ದು, ಅದನ್ನು ಕಂದಾಯ ಸಚಿವ ಆರ್ ಅಶೋಕ್ ತಳ್ಳಿ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಜನರ ಬಗ್ಗೆ ಕಾಳಜಿ ಇದೆಯೇ?:
ರಾಜ್ಯ ವಿಧಾನಸಭೆಯು ಜನಗಳ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ನಡೆಯುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಇವತ್ತು ಸಮಸ್ಯೆಯಾಗಿದೆ. ಆ ಕಾಳಜಿ ಕಾಂಗ್ರೆಸ್ ಪಕ್ಷಕ್ಕೆ ಬೇಕಲ್ಲವೇ, ಎಲ್ಲಿದೆ ಈ ಕಾಳಜಿ. ಈ ಬಗ್ಗೆ ಚರ್ಚೆ ಮಾಡಬೇಕಾಗಿತ್ತಲವೇ, ಏಕೆ ಮಾಡುವುದಿಲ್ಲ. ಚರ್ಚೆ ಮಾಡಿದರೆ ಓಟು ಹೋಗುತ್ತದೆ. ಓಟು ಹೋಗುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ತೀರ್ಮಾನಿಸಿದೆ. ಅದಕ್ಕೆ ಕಾಂಗ್ರೆಸ್ ಈಶ್ವರಪ್ಪರನ್ನು ಹಿಡಿದುಕೊಂಡಿದ್ದಾರೆ ಅಂತಾ ಸಚಿವ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಹಿಂದೆ ಸ್ವಾರ್ಥ:
ಸದನದಲ್ಲಿ ಈ ಹಿಂದೆ ಬಿಜೆಪಿ ರೈತರು, ಬಡವರ ಪರವಾಗಿ ಹೋರಾಟ ಮಾಡಿದೆ. ಆದರೆ ಈಗ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಡವರ ಪ್ರಶ್ನೆ ಏನು ಬರುತ್ತೆ?, ಕಾಂಗ್ರೆಸ್ ಪ್ರತಿಭಟನೆ ಹಿಂದೆ ಕೇವಲ ನಾಯಕರ ಸ್ವಾರ್ಥ ಮಾತ್ರ ಅಡಗಿದೆ. ಒಂದು ಸದನಕ್ಕೆ ಪ್ರತಿ ದಿನ ಒಂದು ಕೋಟಿ ಖರ್ಚಾಗುತ್ತದೆ. ಜನರ ದುಡ್ಡು ತಗೆದುಕೊಂಡು ವಿಧಾನಸೌಧದಲ್ಲಿ ಆರಾಮವಾಗಿ ನಿದ್ದೆ ಹೊಡೆದರೆ ಏನು ಅರ್ಥ ಬರುತ್ತದೆ. ಜನರಿಗೆ ಮೋಸ ಮಾಡಿದ ಹಾಗಲ್ಲವೇ. ಕಾಂಗ್ರೆಸ್ ಪಕ್ಷದವರಿಗೆ ಬುದ್ದಿ, ಮಾನ ಮರ್ಯಾದೆ ಏನಾದರೂ ಇದ್ದರೆ ಜನರ ವಿಷಯ ಚರ್ಚೆ ಮಾಡಲಿ ಎಂದು ಸಚಿವ ಆರ್ ಅಶೋಕ್ ಸವಾಲೆಸೆದಿದ್ದಾರೆ.
ವಿಧಾನಸೌಧ ಕಟ್ಟಿರುವುದು ಕುಸ್ತಿ ಆಡುವುದಕ್ಕಲ್ಲ:
ರಾಜ್ಯದಲ್ಲಿ ಜನರ ಸಮಸ್ಯೆ ಬಿಟ್ಟು ಈಶ್ವರಪ್ಪ, ಡಿ.ಕೆ ಶಿವಕುಮಾರ್, ತೋಳು ಏರಿಸುವುದು ಹೊಡೆದಾಡುವುದು ಸರಿಯಲ್ಲ. ಇದಕ್ಕಾಗಿಯೇ ನೀವು ವಿಧಾನಸಭೆಗೆ ಬರುವುದಾಯ, ಕೆಂಗಲ್ ಹನುಮಂತಯ್ಯ ವಿಧಾನಸೌಧವನ್ನು ಬಡವರಿಗೋಸ್ಕರ ಕಟ್ಟಿದ್ದಾರೆ. ಅದನ್ನು ಬಿಟ್ಟು ಕುಸ್ತಿ ಆಡುವುದಕ್ಕೆ ಅಲ್ಲ. ಕಾಂಗ್ರೆಸ್ ನಾಯಕರು ಹಿಜಾಬ್, ಕೇಸರಿ ಬಗ್ಗೆ ತಮ್ಮ ನಿಲುವೇನು ಎಂದು ಹೇಳಬೇಕು. ಲಕ್ಷಾಂತರ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಹೋಗಬೇಕು. ಶಾಲೆಗೆ ಹೋಗುವುದು ವಿದ್ಯಾಭ್ಯಾಸಕ್ಕಾಗಿಯೇ ಹೊರತು ಮತ ಪ್ರಚಾರಕ್ಕಾಗಿ ಅಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಆ ವ್ಯವಸ್ಥೆಯನ್ನು ಕೊಡುವ ತೀರ್ಮಾನದ ವೇದಿಕೆ ವಿಧಾನಸಭೆ ಆಗಬೇಕು. ವಿಧಾನಸಭೆಗೆ ಅಗೌರವ ತೋರುವ ಕಾಂಗ್ರೆಸ್ ಅನ್ನು ಮುಂದಿನ ದಿನ ಜನ ರಾಜ್ಯದಿಂದ ಓಡಿಸುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಹಿಜಾಬ್ ಹೋರಾಟದ ಹಿಂದೆ ಷಡ್ಯಂತ್ರ:
ಹಿಜಾಬ್ ಪ್ರತಿಭಟನೆ ಮಾಡುತ್ತಿರುವುದು ವಿದ್ಯಾರ್ಥಿನಿಯರ ತಪ್ಪಿನಿಂದ ಅಲ್ಲ. ಈ ಪ್ರತಿಭಟನೆಯ ಹಿಂದೆ ಬಹಳಷ್ಟು ಜನರು ಇದ್ದಾರೆ. ಹೋರಾಟ ಹಿಂದೆ ವಿದೇಶಿ ಕೈವಾಡದ ಷಡ್ಯಂತ್ರವೂ ಇದೆ. ಮೊದಲು ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ?, ಇಷ್ಟು ವೇಗವಾಗಿ ಇದರ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ?, ಹಿಜಾಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದರಾ?, ಇದರ ಹಿಂದೆ ಐಸಿಸ್ ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡವಿದೆ ಎಂದು ಸಚಿವ ಆರ್ ಅಶೋಕ್ ಆರೋಪಿಸಿದರು.
ಶಾಲೆಗೆ ಹೋಗುವುದು ಧರ್ಮ ಪ್ರಚಾರಕ್ಕೆ ಅಲ್ಲ:
ಮಕ್ಕಳು ಶಾಲೆಗೆ ಹೋಗುವುದು ವಿದ್ಯಾಭ್ಯಾಸಕ್ಕಾಗಿಯೇ ಹೊರತೂ ಧರ್ಮ ಪ್ರಚಾರಕ್ಕಾಗಿ ಅಲ್ಲ. ಯಾವುದೇ ಧರ್ಮವಾದರೂ ಶಾಲೆಗೆ ಹೋಗುವುದು ಧರ್ಮ ಪ್ರಚಾರಕ್ಕೆ ಅಲ್ಲ. ನೀವು ನಿಮ್ಮ ಮನೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ಶಾಲೆ-ಕಾಲೇಜಿಗೆ ಕೇವಲ ವಿದ್ಯೆ ಕಲಿಯಲು ಮಾತ್ರ ಹೋಗಿ. ಪ್ರತಿಭಟನೆಯಲ್ಲಿ ಮಕ್ಕಳು ಇರುವುದರಿಂದ ನಾವು ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಆದರೆ ನಾವು ಹಂತ-ಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಹಿಜಾಬ್ ಹೋರಾಟದ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಹೋರಾಟದ ಹಿಂದಿನ ದುರುಳರು ಭಯೋತ್ಪಾದಕರನ್ನು ಹೊರಗೆ ಎಳೆಯಬೇಕಾಗಿದೆ ಅಂತಾ ಸಚಿವ ಆರ್. ಅಶೋಕ್ ಹೇಳಿದರು.












Click it and Unblock the Notifications