ವಿನಾಯಕ್ ಬಾಳಿಗಾ ಕೊಲೆ: ಕಾಶಿ ಮಠದ ಸಂಯಮೀಂದ್ರ ಸ್ವಾಮೀಜಿ ತನಿಖೆಗೆ ಮನವಿ
ಮಂಗಳೂರು, ಜೂನ್ 07 : ಆರ್ ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶಿ ಮಠದ ಸಂಯಮೀಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ 14 ಮಂದಿಯನ್ನು ಈ ಪ್ರಕರಣದಲ್ಲಿ ತನಿಖೆಗೊಳಪಡಿಸಬೇಕೆಂದು ಬಾಳಿಗಾ ಅವರ ಕಿರಿಯ ಸಹೋದರಿ ಅನುರಾಧಾ ಬಾಳಿಗಾ ಕೋರಿದ್ದಾರೆ.
ಕಾಶಿ ಮಠದ ಸಂಯಮೀಂದ್ರ ತೀರ್ಥ ಸ್ವಾಮೀಜಿಯನ್ನೂ ಈ ಪ್ರಕರಣದಲ್ಲಿ ತನಿಖೆಗೊಳಪಡಿಸಬೇಕೆಂದು ಈ ಬಗ್ಗೆ ಅನುರಾಧಾ ಬಾಳಿಗಾ ಅವರು ನಗರದ ಮೂರನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.[ಬಾಳಿಗಾ ಕೊಲೆ ಪ್ರಕರಣ ಮರು ತನಿಖೆಗೆ ಸಂಬಂಧಿಕರ ಆಗ್ರಹ]

"ನರೇಶ್ ಶೆಣೈಗೆ 30 ಲಕ್ಷ ರು. ಸುಪಾರಿ ಕೊಟ್ಟು ಸ್ವಾಮೀಜಿ ಮತ್ತವರ ತಂಡ ಈ ಕೊಲೆ ಮಾಡಿಸಿದೆ. ಹಾಗೂ ಸ್ವಾಮೀಜಿ ತಮ್ಮ ಹಣಬಲದಿಂದ ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ" ಎಂದು ಅನುರಾಧಾ ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
"ವಿನಾಯಕ ಬಾಳಿಗಾ ಅವರು ಕಾಶಿ ಮಠಕ್ಕೆ ಸೇರಿದ ಮಂಗಳೂರಿನ ಕಾರ್ ಸ್ಟ್ರೀಟಿನಲ್ಲಿನ ವೆಂಕಟರಮಣ ದೇವಾಲಯದದ ಕೋಟ್ಯಂತರ ರು. ಅವ್ಯವಹಾರದ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಲು ಕೋರಿ ಉಮೇಶ್ ಮಲ್ಯ ಉರುಫ್ ಸಂಯಮೀಂದ್ರ ತೀರ್ಥ ಸ್ವಾಮಿಗಳಿಗೆ ಪತ್ರ ಬರೆದಿದ್ದೇ ಅವರ ಹತ್ಯೆಗೆ ಕಾರಣವಾಯಿತು" ಎಂದು ತಿಳಿಸಿದ್ದಾರೆ.
ಆರೋಪಿಗಳಾಗಿ ಸ್ವಾಮಿ ಮತ್ತು 14 ಮಂದಿ ಇತರರ ಹೆಸರು ಉಲ್ಲೇಖಿಸಿ ಅವರೆಲ್ಲರ ವಿರುದ್ಧವೂ ತಮ್ಮ ಬಳಿ ಸಾಕ್ಷ್ಯಗಳಿದ್ದು ಅವರನ್ನು ಮರುತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸಂಯಮೀಂದ್ರ ಹೊರತಾಗಿ ಲೆಕ್ಕ ಪರಿಶೋಧಕ ಜಗನ್ನಾಥ ಕಾಮತ್, ನಿವೃತ್ತ ಬ್ಯಾಂಕ್ ಉದ್ಯೋಗಿ ಸಿ ಎಲ್ ಶೆಣೈ, ಚಿನ್ನ ವ್ಯಾಪಾರಿ ರವೀಂದ್ರ ನಿಕ್ಕಂ, ಉದ್ಯಮಿಗಳಾದ ಸುರೇಶ್ ಕಾಮತ್, ಜಿ ವಿ ಕಾಮತ್, ಚೇತನ ಕಾಮತ್, ವಿಘ್ನೇಶ್ ನಾಯಕ್, ಸ್ವಾಮಿಯ ಕಾರು ಚಾಲಕ ಬಂಟ್ವಾಳದ ವಿಜಯಾನಂದ ಶೆಣೈ, ಬೆಂಗಳೂರಿನ ಶಾಖಾ ಮಠದ ಕಾರ್ಯದರ್ಶಿ ಕೆ ನಾರಾಯಣ ಶೆಣೈ, ವೇದವ್ಯಾಸ ಕಾಮತ್, ವಿಶ್ವನಾಥ್ ಭಟ್, ಹನುಮಂತ ಕಾಮತ್ ಹಾಗೂ ಕಾರ್ಕಳದ ರಾಧಾಮಾಧವ ಶೆಣೈ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಈ ಪ್ರಕರಣದ ವಿಚಾರಣೆ ಜೂನ್ 26ರಂದು ನಡೆಯಲಿದೆ. ಈ ಬೆಳವಣಿಗೆಯ ಬಗ್ಗೆ ಸ್ವಾಮಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾಗಿದ್ದು ಅವರ ಸಮೀಪವರ್ತಿಯೊಬ್ಬರು ನ್ಯಾಯಾಲಯದ ತೀರ್ಪಿಗೆ ತಾವು ಬದ್ಧರಾಗಿರುವುದಾಗಿ ಹೇಳಿದ್ದಾರೆ.












Click it and Unblock the Notifications