ಟೆಂಪಲ್ ರನ್ ಆರಂಭಿಸಿದ ಸಚಿವ ಯು.ಟಿ. ಖಾದರ್
Recommended Video

ಮಂಗಳೂರು, ಜೂನ್ 11: ರಾಜ್ಯದ ಮೈತ್ರಿ ಸರಕಾರದಲ್ಲಿ ಸಚಿವರಾಗಿ ಆಯ್ಕೆಯಾದ ಸಚಿವ ಯು.ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಆರಂಭಿಸಿದ್ದಾರೆ. ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಅವರು ಭೇಟಿ ನೀಡಿದರು. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಖಾದರ್, ದೇವಸ್ಥಾನದ ಹೊರಗಿರುವ ಹುಂಡಿಗೆ ಕಾಣಿಗೆ ಹಾಕಿದರು.
ನಂತರ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ವೀರೇಂದ್ರ ಹೆಗಡೆ ಸಚಿವ ಖಾದರ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೇನ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ನಂತರ ಇಲ್ಲೆ ಸಮೀಪದಲ್ಲಿರುವ ಕನ್ಯಾಡಿಯ ಶ್ರೀರಾಮಮಂದಿರಕ್ಕೆ ಭೇಟಿ ನೀಡಿದ ಯು.ಟಿ. ಖಾದರ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೂ ಭೇಟಿ ನೀಡಿದ ಯು.ಟಿ ಖಾದರ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಸಚಿವರಾದ ಬಳಿಕ ಯು.ಟಿ ಖಾದರ್ ಅವರ ಈ ಟೆಂಪಲ್ ರನ್ ಗಮನ ಸೆಳೆದಿದ್ದು ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಕಾಂಗ್ರೆಸ್ ಜಿಲ್ಲೆಯಲ್ಲಿ ನೆಲ ಕಚ್ಚಲು ಕಾರಣ ಹುಡುಕಲಾಗುತ್ತಿದೆ.

ಈ ನಡುವೆ ಮೈತ್ರಿ ಸರಕಾರ ಪತನಗೊಂಡು ಚುನಾವಣೆ ಎದುರಾದರೆ ಎಂಬ ಭಯ ಖಾದರ್ ಅವರನ್ನು ಕಾಡುತ್ತಿದೆಯೇ? ಅಥವಾ ಮುಂಬರುವ ಚುನಾವಣೆಯ ದೃಷ್ಟಿಯಿಂದ ಖಾದರ್ ನಡೆ ಇಟ್ಟಿದ್ದಾರೆಯೇ ? ಎಂಬುದರ ಕುರಿತು ಚರ್ಚೆ ಆರಂಭವಾಗಿದೆ.












Click it and Unblock the Notifications