ಉಜಿರೆ: ತಮ್ಮನ ಜೊತೆ ಜಗಳವಾಡಿ ಅಣ್ಣ ಸಾವು, ಮಗ ಸತ್ತ 13ನೇ ದಿನಕ್ಕೆ ತಂದೆಯೂ ಸಾವಿಗೆ ಶರಣು
ಮಂಗಳೂರು, ಜನವರಿ 16: ಪುತ್ರ ಶೋಕ ನಿರಂತರಂ ಎನ್ನುವಂತೆ ಮಗನ ಅಗಲಿಕೆಯ ನೋವು ಸಹಿಸಲಾಗದೇ ತಂದೆ ಸಾವಿಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಪೆರ್ಲದಲ್ಲಿ ನಡೆದಿದೆ. ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಸಾವಿಗೆ ಶರಣಾದ ತಂದೆ.
ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿಯ ಪುತ್ರ ಯಕ್ಷಿತ್ ಪೂಜಾರಿ (14) ಜನವರಿ 4ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಉಜಿರೆಯ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಯಕ್ಷಿತ್ ಪೂಜಾರಿ ತಮ್ಮನ ಜೊತೆ ಗಲಾಟೆ ಮಾಡಿಕೊಂಡಿದ್ದ. ಆರು ವರ್ಷದ ತಮ್ಮನ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು.

ಈ ಗಲಾಟೆಯಲ್ಲಿ ತಮ್ಮ ಯಕ್ಷಿತ್ ಹೊಟ್ಟೆ ಮೇಲೆ ಕಚ್ಚಿ ಗಾಯಮಾಡಿದ್ದ. ಈ ವಿಚಾರದಲ್ಲಿ ಮನನೊಂದಿದ್ದ ಯಕ್ಷಿತ್ ಪೂಜಾರಿ ಸಾವಿಗೆ ಶರಣಾಗಲು ಯೋಚಿಸಿದ್ದ. ಅದರಂತೆ ತಂದೆ -ತಾಯಿ ಕೆಲಸಕ್ಕೆ ಹೋದ ಬಳಿಕ ಜನವರಿ 4ರಂದು ಮನೆಯ ರೂಂನಲ್ಲಿ ತಾಯಿಯ ಸೀರೆಯಲ್ಲಿ ನೇಣು ಬಿಗಿದುಕೊಂಡು ತಮ್ಮನ ಎದುರೇ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಮಗನ ಸಾವಿನ ಬಳಿಕ ಯೋಗಿಶ್ ಪೂಜಾರಿ ಮತ್ತು ರೇಷ್ಮಾ ದಂಪತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಜನವರಿ 14ರಂದು ಯಕ್ಷಿತ್ ಪೂಜಾರಿಯ 11ನೇ ದಿನದ ಕಾರ್ಯ ನಡೆದಿತ್ತು. ಮಗನ ಸಾವಿನಿಂದ ಅತೀವವಾಗಿ ನೊಂದಿದ್ದ ತಂದೆ ಯೊಗೀಶ್ ಪೂಜಾರಿ ಸಾಯುವ ನಿರ್ಧಾರ ಮಾಡಿದ್ದು, ಇಂದು (ಜನವರಿ 16) ರಂದು ಮಗ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿಯೇ ಸಾವಿಗೆ ಶರಣಾಗಿದ್ದಾರೆ. ಮಗನನ್ನು ಕಳೆದುಕೊಂಡ 13ನೇ ದಿನಕ್ಕೆ ತಂದೆಯೂ ಸಾವನ್ನಪ್ಪಿದ್ದು, ಒಂದೇ ತಿಂಗಳಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಗ ಯಕ್ಷಿತ್ ಪೂಜಾರಿ ಹಾಗೂ ತಂದೆ ಯೋಗಿಶ್ ಪೂಜಾರಿ ಸಾವಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಮದುವೆಗೆ ಹುಡುಗಿ ಕೊಡುತ್ತಿಲ್ಲ ಎಂದು ಯುವಕ ಸಾವಿಗೆ ಶರಣು
ವಿಜಯನರ: ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಮನನೊಂದು ವಿಷ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ. ಗುಡೇಕೋಟೆ ಗ್ರಾಮದ ಬಿ. ಮಧುಸೂದನ್ (26) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಅರೆ ಹುಚ್ಚನಂತೆ ಯುವಕನ ತಂದೆ ವರ್ತಿಸುತ್ತಾರೆಂಬ ಕಾರಣಕ್ಕೆ ಯುವಕನಿಗೆ ಹೆಣ್ಣು ಕೊಡಲು ನಿರಾಕರಿಸುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಮನನೊಂದ ಯುವಕ ಇತ್ತೀಚೆಗೆ ಮದ್ಯಕ್ಕೆ ದಾಸನಾಗಿದ್ದ. ತನಗೆ ಮದುವೆಯಾಗಲು ಹೆಣ್ಣು ಸಿಗಲ್ಲ ಎನ್ನುವ ಕಾರಣಕ್ಕೆ ಮನನೊಂದು ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಿ. ಮಧುಸೂದನ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.












Click it and Unblock the Notifications