ಬಿಜೆಪಿಯದ್ದು ಟೆಸ್ಟ್ ಮ್ಯಾಚ್, ನಮ್ಮದೆಲ್ಲ ಒನ್ ಡೇ ಮ್ಯಾಚ್: ಖಾದರ್
ಮಂಗಳೂರು, ಜನವರಿ 17: ಬಿಜೆಪಿ ಆಪರೇಷನ್ ಕಮಲದ ಕುರಿತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯದ್ದು ಟೆಸ್ಟ್ ಮ್ಯಾಚ್ ಆದರೆ, ನಮ್ಮದೆಲ್ಲ ಒನ್ ಡೇ ಮ್ಯಾಚ್ ಎಂದು ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಮಾಡೋದೆಲ್ಲ ವ್ಯರ್ಥ ಕಸರತ್ತು. ಬಿಬಿಎಂಪಿಯಲ್ಲಿ ನಾಲ್ಕು ಸದಸ್ಯರನ್ನು ಹಿಡಿಯಲಾಗದವರು, ಕಾಂಗ್ರೆಸ್ ನ 15 ಶಾಸಕರನ್ನು ಹಿಡಿಯುತ್ತಾರಾ? ನಮ್ದೆಲ್ಲ ಒನ್ ಡೇ ಮ್ಯಾಚ್. ಒಂದೇ ದಿನದಲ್ಲಿ ಕೆಲಸ ಮಾಡಿ ಮುಗಿಸುತ್ತೇವೆ ಎಂದು ನಗೆ ಚಟಾಕಿ ಹಾರಿಸಿದರು.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಪಕ್ಷಕ್ಕೆ ತೊಂದರೆಯಾಗುವ ಯಾವುದೇ ಕೆಲಸವನ್ನು ಅವರು ಮಾಡುವುದಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಮುಂದೆ ಕೂಡ ಚೆನ್ನಾಗಿಯೇ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವುದಿಲ್ಲ ಎಂದು ಗೊತ್ತಾಗಿ ಬಿಜೆಪಿ ಅವರು ಈಗ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಜನರೇ ಬಿಜೆಪಿ ಅವರನ್ನು ಪ್ರಶ್ನೆ ಮಾಡಲಿದ್ದಾರೆ. ಬಿಜೆಪಿ ಅವರು ವಿರೋಧ ಪಕ್ಷದಲ್ಲಿದ್ದು, ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸಲಹೆ ಸೂಚನೆ ಕೊಡುವುದನ್ನು ಬಿಟ್ಟು ಈ ರೀತಿ ಕೆಲಸ ಮಾಡುವುದು ತಪ್ಪು ಎಂದು ತಿಳಿಸಿದರು.











Click it and Unblock the Notifications