Rain: ಟ್ರಕ್ಕಿಂಗ್ ಪ್ರಿಯರಿಗೆ ಶಾಕ್: ಈ ಜಿಲ್ಲೆಗಳಲ್ಲಿ ಚಾರಣಕ್ಕೆ ನಿಷೇಧ
ಮಂಗಳೂರು, ಜುಲೈ 07: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲಿ ಚಾರಣಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲೆಯ ಜಲ ಪ್ರದೇಶಗಳಲ್ಲಿಯೂ ಅನಧಿಕೃತ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಅತಿಯಾದ ಮಳೆಯಿಂದ ಭೂಕುಸಿತ, ಗುಡ್ಡ ಕುಸಿತ, ಮರ ಬೀಳುವ ಸಾಧ್ಯತೆಯಿದೆ. ಈಗಾಗಲೇ ಮಳೆಯಿಂದ ಎಲ್ಲೆಡೆ ಭೂ ಕುಸಿತ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಶಿಖರಗಳ ಟ್ರೆಕ್ಕಿಂಗ್, ಸಾಹಸ ಚಟುವಟಿಕೆಗಳ ನಿಷೇಧಿಸಲಾಗಿದೆ. ಅಲ್ಲದೇ ಗಿರಿಶಿಖರಗಳ ಚಾರಣ ಹಾಗೂ ಜಲಪಾತ, ಝರಿ, ನದಿ, ಸಮುದ್ರ, ಜಲಾಶಯದ ಪ್ರದೇಶಗಳಿಗೂ ತೆರಳದಂತೆ ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದಲ್ಲಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆಯಡಿ ಕ್ರಮದ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಏನಿದೆ?
2024-2025 ನೇ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಈ ಸಂಬಂಧ ಯಾವುದೇ ಅನಾಹುತಗಳು ಸಂಭವಿಸದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗೃತಾ ಕ್ರಮ ವಹಿಸಬೇಕಾಗಿರುತ್ತದೆ. ಜಿಲ್ಲೆಯಲ್ಲಿ ಸಾರ್ವಜನಿಕರು/ಪ್ರವಾಸಿಗರು ವಿವಿಧ ಗಿರಿತಾಣಗಳಿಗೆ ಚಾರಣಕ್ಕಾಗಿ ತಂಡೋಪ ತಂಡವಾಗಿ ಭೇಟಿ ನೀಡುವುದು.
ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದಿರುತ್ತದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ ಹಾಗು ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದ ಘಟನೆಗಳು ಸಂಭವಿಸುತ್ತಿರುತ್ತವೆ. ಜಿಲ್ಲೆಯ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ಸೂಕ್ತ ಸುರಕ್ಷತಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಬೇಕಾಗಿರುತ್ತದೆ.
ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು/ಪ್ರವಾಸಿಗರಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ. ಅತೀಯಾದ ಮಳೆಯಿಂದ ಭೂಕುಸಿತ. ಗುಡ್ಡ ಕುಸಿತ, ಸಿಡಿಲು ಬಡಿತ, ಮರಬೀಳುವಂತಹ ದುರ್ಘಟನೆಗಳು ನಡೆಯುವ ಸಂಭವವಿರುವುದರಿಂದ ಜಿಲ್ಲೆಯಲ್ಲಿ ಗಿರಿತಾಣ/ಶಿಖರಗಳ ಚಾರಣವನ್ನು (Trekking) ಚಾರಣಗಳಿಗೆ ಮಳೆಗಾಲದ ಅವಧಿಯಲ್ಲಿ ಹೊಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಮಳೆಗಾಲ ಮುಗಿಯುವವರೆಗೆ ಹೋಮ್ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರೆಕ್ಕಿಂಗ್. ಸಾಹಸ ಚಟುವಟಿಕೆಗಳು ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಈ ಆದೇಶದ ಉಲ್ಲಂಘನೆಯು ಡಿಸಾಸ್ಟರ್ ಮ್ಯಾನೇಜೇಂಟ್ ಕಾಯ್ದೆ 2005 ಸೆಕ್ಷನ್ 51ಬಿ ಮತ್ತು ಸಂಬಂಧಿತ ನಿಯಮ/ಕಾಯ್ದೆಗಳ ವಿವಿಧ ಕಲಂಗಳಡಿಯಲ್ಲಿ ದಂಡನೀಯವಾಗಿದೆ. ಈ ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸುವುದು ಎಂದು ತಿಳಿಸಿದ್ದಾರೆ.












Click it and Unblock the Notifications