ವಿಟ್ಲದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಮೂವರ ಬಂಧನ
ಮಂಗಳೂರು, ಜುಲೈ 10: ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮುಡ್ನೂರು ಗ್ರಾಮ ಪಂಚಾಯತ್ ನ ತೆರಿಗೆ ಸಂಗ್ರಾಹಕ ಕೃಷ್ಣ ನಾಯ್ಕ್ (38), ಆಟೊ ಚಾಲಕ ಧನುಷ್ ನಾಯ್ಕ್ (23) ಹಾಗೂ ಸಂತ್ರಸ್ತೆ ಸಂಬಂಧಿಕ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಸಮೀಪದ ಮುಡ್ನೂರು ನಿವಾಸಿಯಾಗಿರುವ ಬಾಲಕಿ ಮೇಲೆ ಕೃಷ್ಣ ನಾಯ್ಕ್, ಧನುಷ್, ಗಣೇಶ್, ಪವನ್ ಹಾಗೂ ಪುನೀತ್ ಎಂಬುವರು ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದ ಬಾಲಕಿ ಮೇಲೆ ಬೇರೆ ಬೇರೆ ಸಂದರ್ಭದಲ್ಲಿ ಐವರು ಆರೋಪಿಗಳು ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. 17 ವರ್ಷದ ಬಾಲಕಿ ಇದೀಗ ಗರ್ಭವತಿಯಾಗಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಯಾರಲ್ಲಿಯೂ ಹೇಳದಂತೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆಶಾ ಕಾರ್ಯಕರ್ತೆ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದರು.












Click it and Unblock the Notifications