ಈ ಚುನಾವಣೆಯೇ ರಮಾನಾಥ ರೈ ಕೊನೆಯ ಬಯಲಾಟ ಎಂದ ಹರಿಕೃಷ್ಣ ಬಂಟ್ವಾಳ
ಮಂಗಳೂರು, ಜನವರಿ 17 : ಈ ಬಾರಿಯ ಚುನಾವಣೆ ಸಚಿವ ರಮಾನಾಥ ರೈ ಅವರ ಕೊನೆಯ ಬಯಲಾಟ. ರಮಾನಾಥ ರೈ ಮಹಿಷಾಸುರನಾದರೆ, ಜನರು ದೇವಿಯ ರೂಪದಲ್ಲಿ ಅವರನ್ನು ಮುಗಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಿಲ್ಲವ ಸಮುದಾಯದವರಿಗೆ ಟಿಕೆಟ್ ನೀಡಲಿ ಎಂದು ಸಚಿವ ರಮಾನಾಥ ರೈ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಬಿಲ್ಲವರ ಬಗ್ಗೆ ಮಾತನಾಡುವ ನೈತಿಕತೆ ರಮಾನಾಥ ರೈಗಿಲ್ಲ ಎಂದು ಕಿಡಿ ಕಾರಿದರು.
ರಮಾನಾಥ ರೈ ಅವರಿಗೆ ತಾಕತ್ತಿದ್ದರೆ ಬಂಟ್ವಾಳದಲ್ಲಿ ಬಿಲ್ಲವರಿಗೆ ಸೀಟು ಕೊಡಿಸಲಿ ಎಂದು ಸವಾಲು ಹಾಕಿದರು. ಮುಸ್ಲಿಮರ ಕೃಪೆಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಈ ವರೆಗೆ ಗೆದ್ದಿದ್ದೇನೆ ಎಂದಿದ್ದ ರಮಾನಾಥ ರೈ ಈ ಬಾರಿ ಮುಸ್ಲಿಂ ಸಮುದಾಯದ ಒಬ್ಬರಿಗೆ ಬಂಟ್ವಾಳ ದಿಂದ ಸ್ಪರ್ಧಿಸಲು ಸೀಟು ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರಿಗೆ ಕಣ್ಣೀರು ಹಾಕಿಸಿದ್ದು ಸಚಿವ ರಮಾನಾಥ ರೈ ಎಂದು ಆರೋಪಿಸಿದ ಅವರು, ಈ ವರೆಗೆ ಲೋಕಸಭಾ ಚುನಾವಣೆಯಲ್ಲಿ ಪೂಜಾರಿಯನ್ನು ಸೋಲಿಸಿದ್ದು ಕೂಡ ರಮಾನಾಥ ರೈ ಎಂದು ಅವರು ಆರೋಪ ಮಾಡಿದರು.












Click it and Unblock the Notifications