ಮಂಗಳೂರು: ವಿದ್ಯಾಭ್ಯಾಸದ ಖರ್ಚಿಗೆ ಮೀನುಗಾರಿಕೆಗೆ ತೆರಳಿದ ವಿದ್ಯಾರ್ಥಿ ಸಮುದ್ರ ಪಾಲು
ಮಂಗಳೂರು, ಮಾರ್ಚ್ 22: ಮೀನುಗಾರಿಕೆಗೆ ತೆರಳಿದ ವಿದ್ಯಾರ್ಥಿ ನೀರು ಪಾಲಾಗಿರುವ ಘಟನೆ ಮಂಗಳೂರಿನ ತೋಟಬೇಂಗ್ರೆಯ ಕಡಲ ತೀರದಲ್ಲಿ ನಡೆದಿದೆ. ಬೆಂಗ್ರೆಯ ನಿವಾಸಿ ಮಿಥುನ್ ಎಂಬರವರ ಪುತ್ರ ಪ್ರಜೀತ್ ಎಂ ತಿಂಗಳಾಯ(15) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಪ್ರಜೀತ್ ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ಖರ್ಚಿಗೆ ಎಂದು ತಂದೆಯೊಂದಿಗೆ ಮೀನುಗಾರಿಕೆಗೆ ತೆರಳುತ್ತಿದ್ದ. ಅಂತೇ ಗುರುವಾರ ಸಂಜೆ ಕೂಡ ಮೀನುಗಾರಿಕೆಗೆ ತೆರಳಿದ್ದಾನೆ. ಈ ವೇಳೆ ಜೋರಾದ ಗಾಳಿ ಹಾಗೂ ನೀರಿನ ರಭಸಕ್ಕೆ ಸಿಲುಕಿ ಪ್ರಜೀತ್ ಸಮುದ್ರ ಪಾಲಾಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಪ್ರಜೀತ್‌ಗಾಗಿ ಹುಡುಕಾಟ ನಡೆಸಿದ್ದಾರೆ.

ನೀರು ಪಾಲಾಗಿ ಕೆಲ ಸಮಯದ ನಂತರ ಸ್ಥಳೀಯರಿಗೆ ಪ್ರಜೀತ್ ಪತ್ತೆಯಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಪ್ರಜೀತ್ ಕೊನೆಯುಸಿರೆಳೆದಿದ್ದಾನೆ. ಪುತ್ರನ ಅಕಾಲಿಗ ಅಗಲಿಕೆ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯಕ್ಕೆ ಸಿಲುಕ್ಕಿದ್ದ ಮೀನುಗಾರರ ರಕ್ಷಣೆ
ಉಡುಪಿ: ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಅರಬ್ಬಿ ಸಮುದ್ರದ ಮಧ್ಯದಲ್ಲಿ ನಡೆದಿದೆ.

ಕಲ್ಮಾಡಿಯ ಪ್ಯಾರು.ಎಸ್ ಎನ್ನುವವರ ಒಡೆತನ ಈ ಅಜ್ಮೇರ್ ಎನ್ನುವ ಬೋಟ್‌ನಲ್ಲಿ ಸುಮಾರು 8ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಬೋಟಿನ ತಳಭಾಗವು ಒಡೆದು ಏಕಾಏಕಿ ನೀರು ಒಳನುಗ್ಗಲಾರಂಭಿಸಿದೆ. ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮೀನುಗಾರರು ಕರಾವಳಿ ಭದ್ರತಾ ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಪೊಲೀಸರು ಭಾರತೀಯ ಕರಾವಳಿ ಕಾವಲು ಪಡೆಗೆ ಮಾಹಿತಿ ರವಾನಿಸಿದ್ದಾರೆ. ಈ ವೇಳೆ ಸಮುದ್ರದಲ್ಲಿ ಗಸ್ತಿನಲ್ಲಿದ್ದ ರಾಜ್‌ದೂತ್ ಮತ್ತು ಗೋಲ್ಡ್ ಫಿಶ್ ಎಂಬ ಎರಡು ನೌಕೆಗಳು ಕೂಡಲೇ ಮೀನುಗಾರರಿದ್ದ ಸ್ಥಳಕ್ಕೆ ತೆರಳಿದ್ದು, ಸಬ್‌ಮರ್ಸಿಬಲ್ ಪಂಪ್‌ಗಳನ್ನು ಬಳಸಿಕೊಂಡು ಮೀನುಗಾರಿಕಾ ಬೋಟ್‌ನೊಳಗೆ ತುಂಬುತಿದ್ದ ನೀರನ್ನು ಖಾಲಿ ಮಾಡಿದ್ದಾರೆ. ಬಳಿಕ ಮೀನುಗಾರರನ್ನು ರಕ್ಷಿಸಿ, ಬೋಟ್‌ಅನ್ನು ಸಮೀಪದ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ರವಾನೆ ಮಾಡಿದ್ದಾರೆ. ಅದೃಷ್ಟವಶಾತ್ ಬೋಟ್‌ನಲ್ಲಿದ್ದ ಎಂಟು ಮೀನುಗಾರರು ಸುರಕ್ಷಿತರಾಗಿದ್ದಾರೆ.












Click it and Unblock the Notifications