ಮಂಗಳೂರು : ವಿವಾದ ಹುಟ್ಟು ಹಾಕಿದ ಕಾಲೇಜಿನ ಕಾರ್ಯಕ್ರಮ!
ಮಂಗಳೂರು, ಸೆಪ್ಟೆಂಬರ್ 04 : ಬಡ ಮಕ್ಕಳಿಗೆ ಸಹಾಯ ಮಾಡುವ ನೆಪದಲ್ಲಿ ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಭಿಕ್ಷಾಟನೆಗೆ ದೂಡಿದೆ ಎಂದು ಆರೋಪಿಸಲಾಗುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮಕ್ಕಳ ಪೋಷಕರಿಗೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗುತ್ತಿದೆ.
'CAUSE' ಹೆಸರಿನಲ್ಲಿ ಮಾಲ್ ಗಳಲ್ಲಿ ಕಾಲೇಜು ಕಾರ್ಯಕ್ರಮ ಆಯೋಜನೆ ಮಾಡುತ್ತದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕೆಲವು ವಿದ್ಯಾರ್ಥಿಗಳು ಜನರ ಮುಂದೆ ನೃತ್ಯ ಮಾಡಬೇಕು. ಇತರ ವಿದ್ಯಾರ್ಥಿಗಳು ಜನರ ಬಳಿ ಹೋಗಿ ಹಣ ಸಂಗ್ರಹಣೆ ಮಾಡುತ್ತಾರೆ.
ಕಾಲೇಜಿನ ಹಳೇ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ 4 ವರ್ಷಗಳಿಂದ ಮಂಗಳೂರಿನ ಮಾಲ್ ಗಳಲ್ಲಿ ಈ ರೀತಿಯ ಕಾರ್ಯಕ್ರಮ ಸದ್ದಿಲ್ಲದೇ ನಡೆಯುತ್ತಿದೆ. ಕಾಲೇಜಿನ ವಿದ್ಯಾರ್ಥಿನಿಯರನ್ನೇ ಹೆಚ್ಚಾಗಿ ಬಳಸಿ ಜನರ ಮುಂದೆ ಮೋಜು ಮಸ್ತಿಯ ನೃತ್ಯ ಮಾಡಿಸಲಾಗುತ್ತಿದೆ ಎಂಬುದು ದೂರು.
ಒಂದೆಡೆ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸುತ್ತಿದ್ದರೆ ಮತ್ತೊಂದು ಕಡೆ ವಿದ್ಯಾರ್ಥಿಗಳು ಮಾಲ್‌ಗಳಿಗೆ ಬಂದವರ ಮುಂದೆ ಹಣಕ್ಕಾಗಿ ಕೈ ಚಾಚಿ ಡಬ್ಬಿ ಹಿಡಿಯುತ್ತಿದ್ದಾರೆ. ಇಂತಹ ಕಾರ್ಯಕ್ರಮ ನಡೆಸಬಾರದು ಎಂಬುದು ಹಳೆಯ ವಿದ್ಯಾರ್ಥಿಗಳ ಆಗ್ರಹವಾಗಿದೆ.

ಬಲವಂತದಿಂದ ನೃತ್ಯ
ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ 'CAUSE' ಕಾರ್ಯಕ್ರಮದಡಿ ನೃತ್ಯ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಈ ಕಾರಣದಿಂದಾಗಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಲ್ಲದ ಮನಸ್ಸಿನಿಂದ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಪೋಷಕರಿಗೆ ಮಾಹಿತಿ ಇಲ್ಲ
'CAUSE' ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಕಾಲೇಜು ಮಾಹಿತಿ ನೀಡುವುದಿಲ್ಲ ಎಂದು ತಿಳಿದುಬಂದಿದೆ. ಉತ್ತಮ ಭವಿಷ್ಯದ ದೃಷ್ಟಿಯಿಂದ ಸಾವಿರಾರು ರೂಪಾಯಿ ಡೊನೇಷನ್ ನೀಡಿ ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಮಕ್ಕಳಿಗೆ ವಿದ್ಯಾರ್ಜನೆ ಬದಲಿಗೆ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಎದ್ದಿದೆ.

ವಿದ್ಯಾರ್ಥಿಗಳು ಏಕೆ ಕುಣಿಯಬೇಕು?
ಮಾಲ್ ಗಳಿಗೆ ಹೆಚ್ಚಿನವರು ವಿಂಡೋ ಶಾಪಿಂಗ್ ಮಾಡಲು ಬಂದಿರುತ್ತಾರೆ. ಈ ನಡುವೆ ಕೆಲ ಪುಂಡ ಪೋಕರಿಗಳು ಮಾಲ್ ಗೆ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರನ್ನು ಕುಣಿಸುತ್ತಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಸುಂದರ ಕಾರ್ಯಕ್ರಮ ಮಾಡಿ
ಅಸಹಾಯಕರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದರೆ ಕಾಲೇಜು ವಿದ್ಯಾರ್ಥಿಗಳಿಂದ ಸುಂದರ ಮನಮುಟ್ಟುವ ಕಾರ್ಯಕ್ರಮವೊಂದನ್ನು ರೂಪಿಸಿ ನಗರದ ಪುರಭವನದಲ್ಲಿ ಅಥವಾ ಕಾಲೇಜು ವ್ಯಾಪ್ತಿಯ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಚಾರಿಟಿ ಕಾರ್ಯಕ್ರಮಕ್ಕಾಗಿ ಟಿಕೆಟ್ ಇಡಬಹುದಿತ್ತು ಎಂಬ ಅಭಿಪ್ರಾಯ ಜನರದ್ದು.

ಸೆಲೆಬ್ರಿಟಿಗಳನ್ನಕರೆಸಿ
ಚಾರಿಟಿ ಗೋಸ್ಕರ ಉಚಿತ ಕಾರ್ಯಕ್ರಮ ನೀಡುವ ಹಲವಾರು ಸೆಲೆಬ್ರಿಟೀಸ್ ಗಳನ್ನು ಕರೆಸಿ ಕಾರ್ಯಕ್ರಮ ನಡೆಸಿದ್ದರೆ ಉದ್ದೇಶಕ್ಕಿಂತ ಹೆಚ್ಚು ಧನ ಸಹಾಯ ಹರಿದು ಬರುತ್ತಿತ್ತು. ಆದರೆ, ಕಾಲೇಜು ಆಡಳಿತ ಮಂಡಳಿ ಅದನ್ನು ಮಾಡದೇ ಮಕ್ಕಳ ಕೈಯಲ್ಲಿ ಡಬ್ಬಿ ನೀಡಿ ಕಂಡವರ ಮುಂದೆ ಕೈ ಚಾಚುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಲಾಗುತ್ತಿದೆ.












Click it and Unblock the Notifications