ಸೌಜನ್ಯ ಪ್ರಕರಣ ಮುಂದಿಟ್ಟು ಧರ್ಮಸ್ಥಳಕ್ಕೆ ಅವಹೇಳನ: ನ್ಯಾಯಕ್ಕಾಗಿ ಸ್ಥಳೀಯರಿಂದ ಸಾಮೂಹಿಕ ಪ್ರಾರ್ಥನೆ
ಜುಲೈ 31: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸೌಜನ್ಯ ಅತ್ಯಾಚಾರ ಪ್ರಕರಣ ಮುಂದಿಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರದ ಭಕ್ತರು ಮತ್ತು ಸ್ಥಳೀಯರು ದೇವರ ಎದುರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಮತ್ತು ಅಣ್ಣಪ್ಪ ಬೆಟ್ಟದ ಮುಂಭಾಗದಲ್ಲಿ ಭಕ್ತರು ಅವಹೇಳನ ನಡೆಸುವವರಿಗೆ ಶಿಕ್ಷೆ ನೀಡುವಂತೆ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.

ಮೊದಲು ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಪ್ರಾರ್ಥನೆ ಸಲ್ಲಿಸಿದ ಭಕ್ತರು, ಕೋರ್ಟ್‌ನಲ್ಲೂ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕೊಲೆ ವಿಚಾರವಾಗಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಹೀನವಾಗಿ ಮಾತನಾಡುತ್ತಿದ್ದಾರೆ.
ಸೌಜನ್ಯನ ಅತ್ಯಾಚಾರ ಮತ್ತು ಕೊಲೆ ಮಾಡಿದ ನೈಜ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮಾತನಾಡುವವರಿಗೆ ಶಿಕ್ಷೆ ನೀಡಬೇಕು. ಮೊದಲು ಸದ್ಭುದ್ಧಿ ನೀಡು, ಬಳಿಕ ಶಿಕ್ಷೆಯೇ ನೀಡು ಎಂದು ನೂರಾರು ಮಂದಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ ಬಳಿಕ ಅಣ್ಣಪ್ಪ ಸ್ವಾಮಿ ಬೆಟ್ಟ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಪ್ರಾರ್ಥನೆ ಸಲ್ಲಿಸಿ ಬೆಟ್ಟದ ಕೆಳಗೆ ಹೆಗ್ಗಡೆ ಅನುಯಾಯಿಗಳಯ ತೆಂಗಿನಕಾಯಿ ಒಡೆದಿದ್ದಾರೆ.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆ
ಧರ್ಮಸ್ಥಳದ ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಯ 17 ವರ್ಷದ ಎರಡನೇ ಪುತ್ರಿ ಸೌಜನ್ಯ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಅಕ್ಟೋಬರ್ 9, 2012ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ದಾರಿ ಮಧ್ಯದ ಕಾಡಿನಲ್ಲಿ ಸೌಜನ್ಯಾಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಕೊಲೆ ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎನ್ನುವಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಹನ್ನೊಂದು ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಆದೇಶ ಹೊರಡಿಸಿತ್ತು.
ಸಂತೋಷ್ ರಾವ್ ಬಿಡುಗಡೆ ಬಳಿಕ ಪ್ರಕರಣ ಮತ್ತೆ ಪ್ರಕರಣ ಮುಖ್ಯ ಭೂಮಿಕೆಗೆ ಬಂದಿದ್ದು, ಮತ್ತೆ ಜಸ್ಟೀಸ್ ಫಾರ್ ಸೌಜನ್ಯ(justice for sowjanya) ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ಮೂಲಕ ಸಾರ್ವಜನಿಕರು ಈ ಪ್ರಕರಣದ ಮರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡುವಂತೆ ಆಗ್ರಹಿಸುತ್ತಿದ್ದಾರೆ.












Click it and Unblock the Notifications