ಶಿರಾಡಿ ಘಾಟ್ : ಇನ್ನೆರೆಡು ದಿನಗಳಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ
ಮಂಗಳೂರು, ಸೆಪ್ಟೆಂಬರ್.28: ಮಂಗಳೂರು - ಬೆಂಗಳೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಂತಿರುವ ಶಿರಾಡಿ ಘಾಟ್ ರಸ್ತೆ ಎಲ್ಲಾ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಈ ಕುರಿತು ಅಧಿಕಾರಿಗಳು ಹಾಗೂ ಹಿರಿಯ ಎಂಜಿನಿಯರ್ ಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಗುರುವಾರ ಸೆಪ್ಟೆಂಬರ್ 27 ರಂದು ಸಂಜೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದೆರಡು ದಿನಗಳ ಒಳಗಾಗಿ ಶಿರಾಡಿ ಘಾಟಿ ಮಾರ್ಗವಾಗಿ ಪ್ರಯಾಣಕ್ಕೆ ಎಲ್ಲಾ ರೀತಿಯ ವಾಹನಗಳು ಸಂಚರಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯವಾದ ಕ್ರಮಕೈಗೊಂಡು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಚಿವ ಯುಟಿ ಖಾದರ್ ಸೂಚಿಸಿದ್ದಾರೆ.

ಆಗಸ್ಟ್ ತಿಂಗಳ ಭಾರೀ ಮಳೆಗೆ ಶಿರಾಡಿ ಘಾಟ್ ಪ್ರದೇಶದಲ್ಲಿ ಅಲ್ಲಲ್ಲಿ ಭೂ ಕುಸಿತ ಉಂಟಾದ ಕಾರಣ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು.
ರಸ್ತೆ ದುರಸ್ತಿಯ ಬಳಿಕ ಇತ್ತೀಚೆಗೆ ಲಘು ವಾಹನಗಳಿಗೆ ಮುಕ್ತಗೊಳಿಸಲಾಗಿತ್ತು. ನಂತರ ಘನ ವಾಹನಗಳಿಗೂ ಶಿರಾಡಿ ಘಾಟ್ ನಲ್ಲಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ವ್ಯಾಪಕ ಒತ್ತಾಯ ಕೇಳಿಬಂದಿತ್ತು.

ಇದೇ ರೀತಿ ಸುಳ್ಯ -ಸಂಪಾಜೆ - ಮಡಿಕೇರಿ ರಸ್ತೆಗಳ ಕಾಮಗಾರಿ ಮುಂದಿನ 15 ದಿನಗಳ ಒಳಗೆ ಮುಗಿಸುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.












Click it and Unblock the Notifications