ನಯನಾಡುವಿನಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ:ಆರೋಪಿ ಬಂಧನ
ಮಂಗಳೂರು, ಮಾರ್ಚ್ 05:ಸೈಕಲ್ ರಿಪೇರಿ ಮಾಡಿಸಲು ಬಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಪಿಲಾತಬೆಟ್ಟು ನಿವಾಸಿ ರಮಾನಂದ ಶೆಣೈ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನಯನಾಡು ಎಂಬಲ್ಲಿ ರಮಾನಂದ ಶೆಣೈ ಅವರ ಸೈಕಲ್ ರಿಪೇರಿ ಅಂಗಡಿಗೆ ಬಾಲಕನೋರ್ವ ತನ್ನ ಸೈಕಲ್ ರಿಪೇರಿ ಮಾಡಿಸಲು ತೆರಳಿದ್ದ . ಈ ಸಂದರ್ಭದಲ್ಲಿ ಆರೋಪಿ ರಮಾನಂದ ಶೆಣೈ "ನೀನು ಊಟ ಮಾಡಿದ್ದೀಯಾ?, ನನ್ನ ಮನೆಯಲ್ಲಿ ಊಟ ಇದೆ. ನಾನೂ ಊಟ ಮಾಡಲಿಲ್ಲ. ನಾವಿಬ್ಬರೂ ನಮ್ಮ ಮನೆಗೆ ಹೋಗಿ ಊಟ ಮಾಡುವ ಎಂದು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿದ್ದ ಎಂದು ಆರೋಪಿಸಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕನನ್ನು ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದ್ದ ಎಂದು ಹೇಳಲಾಗಿದ್ದು, ಆ ಸಂದರ್ಭದಲ್ಲಿ ಬಾಲಕ ಆರೋಪಿ ರಮಾನಂದ ಶೆಣೈ ಅವರ ಹೊಟ್ಟೆಗೆ ಕಾಲಿನಿಂದ ತುಳಿದು ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ.

ಆದರೆ ಬಾಲಕನನ್ನು ಹಿಂಬಾಲಿಸಿಕೊಂಡು ಬಂದು ಆರೋಪಿ ಎಳೆದು ನಿಲ್ಲಿಸಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.ಈ ಕುರಿತು ಪುಂಜಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿ ರಮಾನಂದ ಶೆಣೈ ಅವರನ್ನು ಬಂಧಿಸಿದ್ದಾರೆ.












Click it and Unblock the Notifications