ಬಿಜೆಪಿ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಸಂಘ ಪರಿವಾರ ಕಾರ್ಯಕರ್ತರು
ಮಂಗಳೂರು, ಮಾರ್ಚ್ 13: ಮುಂಬರುವ ವಿಧಾನಸಭಾ ಚುನಾವಣೆ ಬಿಜೆಪಿಗೆ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಸೃಷ್ಟಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಈಗಾಗಲೇ ಬಿಜೆಪಿ ನಾಯಕರುಗಳಿಗೆ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿಗೆ ಸಂಘ ಪರಿವಾರದ ಸಂಘಟನೆಗಳು ತಮ್ಮ ಶಕ್ತಿಯನ್ನು ಧಾರೆ ಎರೆಯಲು ನಿರ್ಧರಿಸಿವೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಹೆಣೆದಿದ್ದ ತಂತ್ರಗಾರಿಕೆಯನ್ನು ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಪ್ರಯೋಗಿಸಲು ಮುಂದಾಗಿವೆ. ಮುಂಬರುವ ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ಜೊತೆ ಸಂಘ ಪರಿವಾರದ 40 ಕ್ಕೂ ಹೆಚ್ಚು ಸಂಘಟನೆಗಳು ಕೈ ಜೋಡಿಸಲಿವೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಮುಖಂಡರುಗಳ ಕಚ್ಚಾಟ, ಅವ್ಯವಹಾರಗಳ ಆರೋಪ ಸೇರದಂತೆ ಇನ್ನಿತರ ಗೊಂದಲಗಳಿಂದ ರೋಸಿ ಹೋಗಿದ್ದ ಸಂಘ ಪರಿವಾರದ ಸಂಘಟನೆಗಳು 2013 ರ ಚುನಾವಣೆ ಸಂಧರ್ಭದಲ್ಲಿ ತಟಸ್ಥ ನೀತಿ ಅನುಸರಿಸಿದ್ದವು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ.

ಪ್ರಧಾನಿ ಮೋದಿ ಬೆನ್ನಿಗೆ ನಿಂತಿರುವ ಸಂಘ ಪರಿವಾರದ ಸಂಘಟನೆಗಳು ಉತ್ತರ ಭಾರತದಲ್ಲಿ ನಡೆದ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಫೀಲ್ಡಿಗೆ ಇಳಿದಿದ್ದವು. ಅದೇ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಸಂಘ ಪರಿವಾರ ಹಾಗೂ ಬಿಜೆಪಿ ಮುಂದಾಗಿದೆ. ಒಂದೆಡೆ ಸಂಘ ಪರಿವಾರ ಸಂಘಟನೆಗಳು ಜಮಾವಣೆಗೊಳ್ಳುತ್ತಿವೆ. ಇನ್ನೊಂದಡೆ ಆರೆಸ್ಸೆಸ್ ಕೂಡ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿಯಲು ಸಿದ್ದವಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂಘ ಪರಿವಾರದ 40 ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇವುಗಳು ಮನೆ ಮನೆ ಭೇಟಿ ಸೇರಿದಂತೆ ಮನಃ ಪರಿವರ್ತನೆಯ ಕಾರ್ಯ ನಡೆಸಲಿವೆ.












Click it and Unblock the Notifications