ಮಂಗಳೂರಿನಲ್ಲಿ ರಂಜಾನ್ ಸಂಭ್ರಮ: ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ
ಮಂಗಳೂರು ಜೂನ್ 15 : ಕರಾವಳಿಯಲ್ಲಿ ಇಂದು ರಂಜಾನ್ ಹಬ್ಬದ ಸಂಭ್ರಮ. ಇಂದು ಮುಂಜಾನೆಯಿಂದಲೇ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಆರಂಭಗೊಂಡಿದೆ.
ಇಂದು ಮುಂಜಾನೆ ಮಂಗಳೂರಿನ ವಿವಿಧ ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿದರು.
ಇಂದು ಬೆಳ್ಳಂಬೆಳಗ್ಗೆ ನಗರದ ಬಾವುಟಾ ಗಡ್ಡದಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ರಂಜಾನ್ ವಿಶೇಷ ಈದ್ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯ ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು.

ಒಂದು ತಿಂಗಳಿನಿಂದ ಕಠಿಣ ವ್ರತ ಆಚರಿಸಿದ ಬಳಿಕ ಇಂದು ಉಪವಾಸ ಅಂತ್ಯಗೊಂಡಿದ್ದು, ರಂಜಾನ್ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.
ಇಂದು ಮಂಗಳೂರಿನ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರರೊಂದಿಗೆ ಸಚಿವ ಯು.ಟಿ ಖಾದರ್ , ಜೆಡಿಎಸ್ ಮುಖಂಡ ಆಶ್ರಫ್ , ಮಸೂದ್ ಸೇರಿದಂತೆ ಇನ್ನಿತರ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು. ಪ್ರಾರ್ಥನೆಯ ಬಳಿಕ ಶುಭಾಶಯ ಕೋರಿದರು.
ನಿನ್ನೆ ಕೇರಳದ ಕ್ಯಾಲಿಕಟ್ ನಲ್ಲಿ ಚಂದ್ರ ದರ್ಶನವಾದ ಹಿನ್ನಲೆ ಇಂದು ರಂಜಾನ್ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕರಾವಳಿಯಲ್ಲಿ ಸಂಭ್ರಮದಿಂದ ರಂಜಾನ್ ಆಚರಿಲಾಗುತ್ತಿದೆ.












Click it and Unblock the Notifications