ಪುತ್ತೂರು; ಬಡ ವಿದ್ಯಾರ್ಥಿನಿಗೆ 10ನೇ ತರಗತಿ ಜೊತೆ ಜೀವನದ ಪರೀಕ್ಷೆ!
ಮಂಗಳೂರು, ಜೂನ್ 30; ಕರ್ನಾಟಕ ಸರ್ಕಾರ ಎಸ್. ಎಸ್. ಎಲ್. ಸಿ ಪರೀಕ್ಷಾ ದಿನಾಂಕ ನಿಗದಿ ಮಾಡಿದೆ. ಪರೀಕ್ಷೆಗೆ ದಿನ ನಿಗದಿಯಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಪರೀಕ್ಷೆಗೆ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಪುನರ್ ಅಭ್ಯಾಸ, ಓದು, ಬರೆಯುವುದರ ಮೂಲಕ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈ ವಿದ್ಯಾರ್ಥಿನಿಗೆ ಮಾತ್ರ ಪರೀಕ್ಷೆ ಎದುರಿಸುವ ಜೊತೆಗೆ ಕಾಡುವ ಬಡತನವನ್ನೂ ನಿಯಂತ್ರಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ತಾಲೂಕಿನ ಬನ್ನೂರು ಗ್ರಾಮದ ಕುಂಬುರ್ಗ ನಿವಾಸಿ ದೀಕ್ಷಾ ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿಯಾಗಿದ್ದು, ಮುರಿದು ಬೀಳುವ ಹಂತದಲ್ಲಿರುವ ಮನೆಯಲ್ಲೇ ಅಭ್ಯಾಸ ಮಾಡಬೇಕಿದೆ.
ಭಾರೀ ಮಳೆಯಿಂದಾಗಿ ವಿದ್ಯಾರ್ಥಿನಿ ದೀಕ್ಷಾ ಮನೆಯ ಒಂದು ಭಾಗ ಸಂಪೂರ್ಣ ಕುಸಿದಿದೆ. ಪ್ಲಾಸ್ಟಿಕ್ ಹೊದಿಕೆಯಲ್ಲಿರುವ ಈ ಮನೆಯ ಮೇಲ್ಫಾವಣಿಯೂ ಕುಸಿಯುವ ಭೀತಿಯಲ್ಲಿದೆ. ಆದರೆ ಕುಸಿದ ಮನೆಯನ್ನು ದುರಸ್ತಿ ಮಾಡಲೂ ಹಣವಿಲ್ಲದ ಸ್ಥಿತಿಯಲ್ಲಿ ದೀಕ್ಷಾ ಕುಟುಂಬವಿದೆ.

ದೀಕ್ಷಾ ತಂದೆ ಕಾಲು ನೋವಿನಿಂದ ದುಡಿಯುವ ಶಕ್ತಿ ಕಳೆದುಕೊಂಡಿದ್ದು, ತಾಯಿ ಮನೆಯಲ್ಲಿ ಬೀಡಿ ಕಟ್ಟಿ ಮನೆ ಮಂದಿಯನ್ನು ಸಾಕುತ್ತಿದ್ದಾರೆ. ದೀಕ್ಷಾಳಿಗೆ 8ನೇ ತರಗತಿಯಲ್ಲಿ ಕಲಿಯುತ್ತಿರುವ ಸಹೋದರನೂ ಇದ್ದು, ಆತನ ವಿದ್ಯಾಭ್ಯಾಸದ ಹೊಣೆಯೂ ಬಡ ತಾಯಿಯ ಮೇಲಿದೆ.
ಮನೆಯ ಬಡತನದ ನಡುವೆ ದೀಕ್ಷಾ ಎಸ್. ಎಸ್. ಎಲ್. ಸಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾಳೆ. ಮನೆಯೇ ಬಿದ್ದು ಹೋದ ಮೇಲೆ ಇನ್ನು ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದಾದರೂ ಹೇಗೆ? ಎನ್ನುವ ಗೊಂದಲದಲ್ಲಿದ್ದಾಳೆ.

ಮಳೆಗೆ ಬಿದ್ದ ಮನೆಯಲ್ಲಿ ವಾಸಿಸುವುದು ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಇದೀಗ ಬನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಹಾಗೂ ತಂಡ ದೀಕ್ಷಾ ಹಾಗೂ ಆಕೆಯ ಮನೆಯವರನ್ನು ಗ್ರಾಮ ಪಂಚಾಯತಿ ಸಭಾಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿದೆ. ಅಲ್ಲದೆ ಪಂಚಾಯತಿ ಮೂಲಕ ಮನೆಯ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದೆ.











Click it and Unblock the Notifications