ಪುತ್ತೂರು ಚುನಾವಣಾ ಫಲಿತಾಂಶ 2023: ಕಾಂಗ್ರೆಸ್ ಜಯಭೇರಿ, ಇಬ್ಬರ ನಡುವೆ ಮೂರನೇಯವರಿಗೆ ಲಾಭ
ಕರ್ನಾಟಕದ 224 ಕ್ಷೇತ್ರಗಳ ಪೈಕಿ ಭಾರೀ ಕುತೂಹಲಕ್ಕೆ ಕಾರಣವಾದ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೂಡಾ ಒಂದು. ಕ್ಷೇತ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ನಡುವಿನ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪುತ್ತೂರಿನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಬಿಜೆಪಿ ಮತಗಳು ಇಬ್ಬಾಗಗೊಂಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಪುತ್ತೂರು ಕ್ಷೇತ್ರದಲ್ಲಿ ಒಟ್ಟು ಶೇ. 79.91 ಮತದಾನವಾಗಿತ್ತು. ಮೂಲ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಾದ ಅರುಣ್ ಕುಮಾರ್ ಪುತ್ತಿಲ ಅವರು ಕಮಲದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯ ಎದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ನಾಮಪತ್ರ ಹಿಂದಕ್ಕೆ ಪಡೆಯುವಂತೆ ಬಹಳಷ್ಟು ಒತ್ತಡವಿದ್ದರೂ, ಪುತ್ತಿಲ ಕಣದಿಂದ ಹಿಂದಕ್ಕೆ ಸರಿದಿರಲಿಲ್ಲ. ಪುತ್ತಿಲ ಅವರ ಸ್ಪರ್ಧೆಗೆ ಹಿಂದೂ ಸಂಘಟನೆಗಳ ವ್ಯಾಪಕ ಬೆಂಬಲವಾಗಿತ್ತು. ಬಿಜೆಪಿ ಮತಗಳನ್ನು ಪುತ್ತಿಲ ಒಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಕಳೆದ ಅಂದರೆ 2018ರ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಸಂಜೀವ ಮಠಂದೂರು ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಶಕುಂತಲಾ ಶೆಟ್ಟಿ ವಿರುದ್ದ 19,477 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಈ ಬಾರಿ ಮಠಂದೂರು ಮತ್ತು ಶಕುಂತಲಾ ಶೆಟ್ಟಿ ಇಬ್ಬರೂ ಆಯಾಯ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರೂ, ಬಿಜೆಪಿಯ ಸ್ಟಾರ್ ಪ್ರಚಾರಕರ ಹೆಸರನ್ನು ಕಾನೂನು ಬಾಹಿರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಚುನಾವಣಾ ಏಜೆಂಟ್ ದೂರು ಕೊಟ್ಟಿದ್ದರು.












Click it and Unblock the Notifications