ಮಂಗಳೂರು ಪಬ್ ದಾಳಿ; ಪೊಲೀಸರ ವಿರುದ್ಧ ಭಾಸ್ಕರರಾವ್ ಗರಂ
ಮಂಗಳೂರು, ಜುಲೈ, 26: "ಮಂಗಳೂರಿನಲ್ಲಿ ಪಬ್ ದಾಳಿ ವಿಚಾರದಲ್ಲಿ ಪೊಲೀಸ್ ಆಯುಕ್ತರು ಪ್ರಕರಣ ದಾಖಲಿಸುತ್ತೇನೆ ಎಂದು ಹೇಳಿದ್ದರೆ ಸರ್ಕಾರ ಸಾಯಂಕಾಲವೇ ಗಂಟು ಮೂಟೆ ಕಟ್ಟಿಕೊಟ್ಟು ಅವರನ್ನು ಕಳುಹಿಸಿ ಬಿಡುತ್ತದೆ. ಆದ್ದರಿಂದ ಬೇರೆ ವಿಧಿ ಇಲ್ಲದೆ ಅಲ್ಲಿ ಯಾವುದೇ ನೈತಿಕ ಪೊಲೀಸ್ ಗಿರಿ ನಡೆದಿಲ್ಲವೆಂದೇ ಹೇಳಬೇಕಾಗುತ್ತದೆ. ಅವರು ಅಸಹಾಯಕರು" ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಎಎಪಿ ನಾಯಕ ಭಾಸ್ಕರ್ ರಾವ್ ಹೇಳಿದರು.
ಮಂಗಳೂರಿನಲ್ಲಿ ಪಬ್ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಜಕೀಯ ಪ್ರೋತ್ಸಾಹವಿದ್ದಾಗ ಮಾತ್ರ ನೈತಿಕ ಪೊಲೀಸ್ ಗಿರಿ ನಡೆಯುತ್ತದೆ. ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿದೆ. ನೈತಿಕ ಪೊಲೀಸ್ ಗಿರಿ ಮಾಡುವವರಿಗೆ ರಕ್ಷಣೆ ದೊರಕುತ್ತಿರುವುದೇ ವಿಪರ್ಯಾಸದ ಸಂಗತಿ. ಇಲಾಖೆಯಲ್ಲಿ ಯಾರಾದರೂ ಇದು ತಪ್ಪು ಎಂದು ನೇರವಾಗಿ ಹೇಳೀದರೆ ಅಂತಹವರು ಉಳಿಯುವುದು ಕಷ್ಟ" ಎಂದರು.
"ಇದು ಎಲ್ಲಾ ಪಕ್ಷಗಳಿಗೂ ಅನ್ವಯವಾಗುತ್ತದೆ. ನಮ್ಮ ಪಕ್ಷಗಳಿಗೂ ಅನ್ವಯವಾಗುತ್ತದೆ. ಈ ಬಗ್ಗೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ತಕ್ಷಣ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರ ಮೂಲಕ ಹೆಚ್ಚಿನ ಮಾಹಿತಿ ಪಡೆದು ಈ ಬಗ್ಗೆ ನಿಲುವನ್ನು ತೆಗೆದುಕೊಳ್ಳುತ್ತೇವೆ. ಅಲ್ಲಿ ನಿನ್ನೆ ನೈತಿಕ ಪೊಲೀಸ್ ಗಿರಿ ನಡೆದಿದ್ದಲ್ಲಿ ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಪಬ್‌ಗೆ ಭೇಟಿ ನೀಡಿ ಮಾತನಾಡಿದ್ದ ಮಂಗಳೂರು ಪೊಲೀಸ್ ಆಯುಕ್ತರು, "ಅಲ್ಲಿ ಯಾವುದೇ ರೀತಿಯ ಘರ್ಷಣೆಗಳು ನಡೆದಿಲ್ಲ. ಯುವಕರು, ವಿದ್ಯಾರ್ಥಿಗಳ ನಡುವೇ ಯಾವುದೇ ರೀತಿಯ ಗಲಾಟೆಗಳು ಆಗಿಲ್ಲ. ಇನ್ನು ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ" ಎಂದು ಮಂಗಳವಾರ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, "ಪಬ್ ವಿರುದ್ಧ ಪ್ರಕರಣ ದಾಖಲಿಸಿದ್ದರೆ ಪೊಲೀಸ್ ಅಧಿಕಾರಿಗಳು ಗಂಟುಮೂಟೆ ಕಟ್ಟಬೇಕಾಗಿತ್ತು. ಅದಕ್ಕಗಿಯೇ ಅವರು ಪ್ರಕರಣವನ್ನು ದಾಖಲಿಸಿಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಹಾಗೆಯೇ ಇತ್ತೀನ ದಿನಗಳಲ್ಲಿ ನೈತಿಕ ಪೊಲೀಸ್ ಗಿರಿ ಮಾಡುತ್ತಿರುವುದು ಆಶ್ಚರ್ಯದ ಸಂಗತಿಯಾಗಿದ್ದು, ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ಆಗಬೇಕು" ಎಂದು ಆಗ್ರಹಿಸಿದರು.












Click it and Unblock the Notifications