ನೇತ್ರಾವತಿ ಉಳಿಸಲು ಸೆ.15ರಂದು ದಿನಪೂರ್ತಿ ಹೆದ್ದಾರಿ ಬಂದ್
ಮಂಗಳೂರು, ಸೆಪ್ಟೆಂಬರ್, 12 : ಅತ್ತ ಉತ್ತರ ಕರ್ನಾಟಕದಲ್ಲಿ ಕಳಸಾ-ಬಂಡೂರಿ ಯೋಜನೆಗಾಗಿ ಹೋರಾಟ ನಡೆಯುತ್ತಿದೆ. ಇತ್ತ ದಕ್ಷಿಣ ಕನ್ನಡದಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಕಾವು ಪಡೆದುಕೊಳ್ಳುತ್ತಿದೆ. ಸೆ.15ರಂದು ರಾಷ್ಟ್ರೀಯ ಹೆದ್ದಾರಿ 75ನ್ನು ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
'ಸೆ. 15ರ ಮಂಗಳವಾರ ಉಪ್ಪಿನಂಗಡಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗಿದೆ' ಎಂದು ಉಪ್ಪಿನಂಗಡಿ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಡಾ.ನಿರಂಜನ ರೈ ಹೇಳಿದ್ದಾರೆ. [ಎತ್ತಿನಹೊಳೆ ಕುಡಿಯುವ ನೀರಿಗಾಗಿ ಮಾತ್ರ]

'ಒಂದು ದಿನ ಪೂರ್ತಿ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ ಅಗತ್ಯವಿದ್ದರೆ ರಾತ್ರಿಯೂ ಹೋರಾಟವನ್ನು ಮುಂದುವರೆಸುತ್ತೇವೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಯಲ್ಲಿ ಜನರು ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು' ಎಂದು ನಿರಂಜನ ರೈ ಕರೆ ನೀಡಿದ್ದಾರೆ. ['ಎತ್ತಿನಹೊಳೆಯಿಂದ ನೇತ್ರಾವತಿ ಬರಿದಾಗುತ್ತೆ']
'ಎತ್ತಿನಹೊಳೆ ಯೋಜನೆಯ ಸಾಧಕ ಬಾಧಕಗಳನ್ನು ಚರ್ಚೆ ನಡೆಸದೇ ಅದನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಕರಾವಳಿ ಬರಡಾಗಲಿದೆ. ನೇತ್ರಾವತಿ ನದಿಯನ್ನು ಆಶ್ರಯಿಸಿರುವ ಕರಾವಳಿ ಭಾಗದ ಜನರಿಗೆ ತೊಂದರೆಯಾಗಲಿದೆ' ಎಂದು ನಿರಂಜನ ರೈ ಹೇಳಿದರು. [ಎತ್ತಿನ ಹೊಳೆ ಯೋಜನೆ ಬಗ್ಗೆ ಓದಿ]
ಏನಿದು ಯೋಜನೆ? : ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ 24 ಟಿಎಂಸಿ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. 2014ರ ಮಾರ್ಚ್ 3ರಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ.












Click it and Unblock the Notifications