ಮತ್ತೊಂದು ಸರ್ಜಿಕಲ್ ದಾಳಿಗೆ ಒತ್ತಾಯಿಸಿ ಮಂಗಳೂರಿನಲ್ಲಿ ವಿಎಚ್ ಪಿ ಬಜರಂಗದಳ ಪ್ರತಿಭಟನೆ
ಮಂಗಳೂರು, ಫೆಬ್ರವರಿ 15:ಸರ್ಜಿಕಲ್ ದಾಳಿ ಹಾಗೂ ಭಾರತೀಯ ಸೇನೆ ಕಾಶ್ಮೀರದಲ್ಲಿ ಆರಂಭಿಸಿದ್ದ ಆಪರೇಷನ್ ಆಲ್ ಔಟ್ ಬಳಿಕ ಹೆದರಿ ಭೂಗತರಾಗಿದ್ದ ಪಾಕ್ ಪ್ರೇರಿತ ಉಗ್ರರು ಸಿ ಆರ್ ಪಿ ಎಫ್ ಯೋಧರ ವಾಹನದ ಮೇಲೆ ನಡೆಸಿದ ದಾಳಿಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಜೈಷ್ ಎ-ಮೊಹಮ್ಮದ್ ಸಂಘಟನೆಯ ಉಗ್ರನೋರ್ವ ಸಿಆರ್ ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಗೆ 42 ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ಈ ಪೈಶಾಚಿಕ ಕೃತ್ಯದ ವಿರುದ್ಧ ದೇಶದಲ್ಲಿ ರಕ್ತ ಕುದಿಯತ್ತಿದೆ.
ಕಾಶ್ಮೀರದಲ್ಲಿ ಜೈಷ್ ಎ ಮೊಹಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಉಗ್ರರಿಗೆ ತಕ್ಕ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸುವಂತೆ ಒತ್ತಾಯ ಕೇಳಿ ಬರುತ್ತಿದೆ.

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಪಿವಿಎಸ್ ವೃತ್ತದ ಬಳಿ ಸೇರಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.

ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯ ಪ್ರತೀಕಾರವಾಗಿ ಉಗ್ರರ ವಿರುದ್ಧ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಗಾಗಿ ಆಗ್ರಹಿಸಿ ಘೋಷಣೆ ಕೂಗಿದರು.












Click it and Unblock the Notifications