ಬಾಲಕಿ ಮೇಲೆ ಪೊಲೀಸ್ ದೌರ್ಜನ್ಯದ ವಿರುದ್ಧ ಠಾಣೆ ಎದುರು ಪ್ರತಿಭಟನೆ
ಮಂಗಳೂರು, ಜುಲೈ 2: ಸಂಪ್ಯಾ ಪೊಲೀಸ್ ಠಾಣೆಯಲ್ಲಿ ಬಾಲಕಿ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣ ಕಾವು ಪಡೆದುಕೊಂಡಿದೆ. ಪುತ್ತೂರು ಗ್ರಾಮಾಂತರ ಸಂಪ್ಯಾ ಪೊಲೀಸ್ ಠಾಣೆಯಲ್ಲಿ ನಡೆದ ಬಾಲಕಿ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಇಂದು ವಿವಿಧ ಸಂಘಟನೆಗಳು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದವು.
ಚಿನ್ನದ ಸರ ಕದ್ದ ಆರೋಪದಡಿ ಸಂಪ್ಯಾ ಠಾಣೆ ಪೊಲೀಸರು ಬಾಲಕಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಪ್ಯಾ ಠಾಣೆಯ ಓರ್ವ ಪುರುಷ ಹಾಗೂ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದರು.

ಅಮಾನತುಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದಲೇ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.












Click it and Unblock the Notifications