ದಕ್ಷಿಣ ಕನ್ನಡದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಿದೆ: ಪ್ರೊ.ರಾಧಾಕೃಷ್ಣ
ಮಂಗಳೂರು, ಸೆಪ್ಟೆಂಬರ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಹಾಗು ಶೋಭಾ ಕರಂದ್ಲಾಜೆ ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ರಾಧಾಕೃಷ್ಣ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆ ಸೌಹಾರ್ದತೆಯ ಬೀಡಾಗಿದ್ದು, ಇಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಅವರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ ಎಂದು ಕಿಡಿಕಾರಿದರು.
ಇಲ್ಲಿ ಹಿಂದೂ ಹಾಗು ಮುಸ್ಲೀಮರ ಮಧ್ಯೆ ಅನ್ಯೋನ್ಯತೆ ಇದೆ. ರಾಜಕೀಯ ಕಾರಣಕ್ಕಾಗಿ ಅದನ್ನು ಹಾಳುಗೆಡಹುವ ಪ್ರಯತ್ನ ಮಾಡಲಾಗುತ್ತಿದೆ. ಯುವಕರಲ್ಲಿ ಮತೀಯ ಭಾವನೆ ಬಿತ್ತಿ ಸಾಮರಸ್ಯ ಹಾಳುಗೆಡಹುತ್ತಿದ್ದಾರೆ.

ಕಳೆದ 4 ವರ್ಷಗಳಿಂದ ಕೇಂದ್ರದ ಮೋದಿ ಸರ್ಕಾರ ಸಬ್ ಕಾ ವಿಕಾಸ್, ಅಚ್ಛೇ ದಿನ್ ಇತ್ಯಾದಿ ಹೇಳಿಕೆಗಳನ್ನು ನೀಡುತ್ತಾ ಜನರನ್ನು ನಂಬಿಸಿ ಮಂಕುಬೂದಿ ಎರಚುತ್ತಿದ್ದಾರೆ. ಕೇಂದ್ರ ಸರ್ಕಾರದ 37 ಘೋಷಣೆಗಳ ಪೈಕಿ ಯಾವ ಘೋಷಣೆಯನ್ನೂ ಕೂಡ ಯಥಾವತ್ತಾಗಿ ಅನುಷ್ಠಾನಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ತೈಲ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ತಡೆಗಟ್ಟಲು ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ ರಾಧಾಕೃಷ್ಣ, ಪ್ರತಿ ವಿಚಾರದಲ್ಲಿ ಕೇಂದ್ರದ ಸಚಿವ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.












Click it and Unblock the Notifications