ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1ಎನ್ 1 ಕುರಿತು ಜಾಗೃತಿ
ಮಂಗಳೂರು, ಏಪ್ರಿಲ್ 25:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಿಯಾದರೂ ಎಚ್1ಎನ್1 ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೆ ಕೂಡಲೇ ಸಮೀಪದ ಸರಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಎಚ್1ಎನ್ 1 ಪ್ರಕರಣ ಇಲ್ಲ. ಆದರೂ ಜಾಗೃತಿ ಮೂಡಿಸಲಾಗುತ್ತಿದೆ. ಎಚ್1 ಎನ್1 ಸಾಮಾನ್ಯ ವೈರಸ್ ಜ್ವರವಾಗಿದ್ದು, ನಿರ್ದಿಷ್ಟ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ತೀವ್ರ ಸ್ವರೂಪದ ಜ್ವರ, ಕೆಮ್ಮು, ಕಫ, ಶೀತ ಮತ್ತು ಗಂಟಲು ಕೆರೆತ, ಮೈಕೈ ನೋವು ವಾಂತಿ ಭೇದಿ, ಉಸಿರಾಟದ ತೊಂದರೆ ಎಚ್1 ಎನ್1 ಸೋಂಕಿನ ಲಕ್ಷಣಗಳಾಗಿವೆ ಎಂದು ಡಾ.ರಾಮಕೃಷ್ಣ ತಿಳಿಸಿದರು.
ಕೈಗಳ ಶುಚಿತ್ವ ಸೇರಿದಂತೆ ಶರೀರದ ಶುಚಿತ್ವ ಕಾಪಾಡಬೇಕು.ಪೌಷ್ಠಿಕ ಆಹಾರ ಸೇವಿಸುವುದು, ಧಾರಳವಾಗಿ ನೀರು ಕುಡಿಯುವುದು, ಜನ ಸಂದಣಿ ಪ್ರದೇಶಗಳಿಗೆ ಭೇಟಿ ನೀಡುವಾಗ ಸಾಕಷ್ಟು ಮುಂಜಾಗ್ರತೆ ವಹಿಸುವುದು, ಫ್ಲೂ ತರಹದ ಲಕ್ಷಣಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸದೆ ವೈದ್ಯರ ಸಲಹೆಯಂತೆ ಚಿಕಿತ್ಸೆ, ವಿಶ್ರಾಂತಿ ಪಡೆಯಬೇಕು ಎಂದು ಡಾ.ರಾಮಕೃಷ್ಣ ತಿಳಿಸಿದ್ದಾರೆ.

ಎಚ್1 ಎನ್1 ಸೋಂಕಿತ ರೋಗಿಗಳು ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಹರಡುತ್ತವೆ. ಸೋಂಕಿತರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications