Praveen Nettaru House: ಕೊನೆಗೂ ನೆರವೇರಿದ ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶ
ಮಂಗಳೂರು, ಏಪ್ರಿಲ್, 27: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಕನಸು ಕೊನೆಗೂ ನನಸಾಗಿದೆ. ಸುಳ್ಯದ ಬೆಳ್ಳಾರೆಯ ನೆಟ್ಟಾರ್‌ನಲ್ಲಿ ಪ್ರವೀಣ್ ಕನಸಿನಂತೆ ಮನೆಯನ್ನು ನಿರ್ಮಾಣ ಮಾಡಿದ್ದು, ಈ ಹೊಸ ಮನೆಯ ಗೃಹಪ್ರವೇಶ ಇಂದು ನೆರವೇರಿದೆ.
ಇಂದು ಪ್ರವೀಣ್ ಕನಸಿನಂತೆ ನಿರ್ಮಾಣವಾದ ಮನೆಯ ಗೃಹಪ್ರವೇಶ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಬಿಜೆಪಿ ಮುಖಂಡರು ಮನೆಯ ಗೃಹ ಪ್ರವೇಶಕ್ಕೆ ಸಾಕ್ಷಿ ಆಗಿದ್ದಾರೆ.

ಮಾಧ್ಯಮಗಳ ಜೊತೆ ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರವೀಣ್ ನೆಟ್ಟಾರು ನಮ್ಮ ಪಕ್ಷದ ಕಾರ್ಯಕರ್ತ. ಅವನಿಗೆ ಅವನದೇ ಆದ ಹಲವಾರು ಕನಸುಗಳಿದ್ದವು. ಆದರೆ ಅವನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಒಬ್ಬ ಕಾರ್ಯಕರ್ತನ ಬಲಿದಾನವಾದಾಗ ಇಡೀ ಪಕ್ಷ ಅವನ ಜೊತೆ ನಿಂತಿತ್ತು. ಅವನ ಕನಸಿನ ಮನೆ ನಿರ್ಮಾಣದ ಅರ್ಧದಲ್ಲೇ ನಿಂತಿತ್ತು. ಆ ಕನಸನ್ನು ಇದೀಗ ನನಸು ಮಾಡಲು ನಾವೆಲ್ಲಾ ಕೂತು ಚರ್ಚೆ ಮಾಡಿದ್ದೆವು ಎಂದರು.
ಪ್ರವೀಣ್ ಕುಟುಂಬಕ್ಕೆ ಬೇಕಾದ ಪೂರ್ಣವಾದ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಪಕ್ಷ ಮಾಡಿದೆ. ಪ್ರವೀಣ್ ಹತ್ಯೆಯ ನಂತರ ಹಂತಕರಿಗೆ ಉತ್ತರ ಕೊಡಬೇಕೆಂದು ನಿಶ್ಚಯ ಮಾಡಿದ್ದೆವು. ಅಲ್ಲದೆ ಪ್ರವೀಣ್ ಹತ್ಯೆಯೇ ಕೊನೆಯಾಗಬೇಕೆಂದು ನಿಶ್ಚಯ ಮಾಡಿದ್ದೆವು. ಇದರ ಹಿಂದಿರುವ ಪಿಎಫ್ಐ ಸಂಘಟನೆಯನ್ನು ಮಟ್ಟ ಹಾಕಬೇಕೆಂದು ನಿರ್ಧರಿಸಿದ್ದೆವು ಎಂದರು.
ಇನ್ನು ಪ್ರಕರಣವನ್ನು ಎನ್.ಐ.ಎಗೆ ಕೊಟ್ಟಾಗ ಹತ್ಯೆಯ ಕಾರಣ ಹೊರಬಂದಿದೆ. ಇವತ್ತು ಪಿಎಫ್ಐ ನಿಷೇಧ ವಾಗಿದೆ. ಹಾಗೆಯೆ ಎನ್.ಐ.ಎ ಮೂಲಕ ಇದರ ಹಿಂದಿರುವ ಎಲ್ಲರನ್ನೂ ಬಂಧಿಸುವ ಕೆಲಸ ನಡೆಯಿತು. ಬೇರೆ ಬೇರೆ ಪ್ರಕರಣದಲ್ಲಿ ಭಾಗಿಯಾದ ಸುಮಾರು 400 ಪಿಎಫ್ಐ ಕಾರ್ಯಕರ್ತರನ್ನು ಎನ್.ಐ.ಎ ಬಂಧಿಸಿದೆ. ಈ ಮೂಲಕ ಪ್ರವೀಣ್ ಆತ್ಮಕ್ಕೂ ಶಾಂತಿ ಕೊಡುವ ಪ್ರಯತ್ನ ಮಾಡಿದ್ದೇವೆ. ನರೇಂದ್ರ ಮೋದಿ ಸರ್ಕಾರ ಮತ್ತು ಅಮಿತ್ ಶಾ ಪಿಎಫ್ಐಯನ್ನು ನಿಷೇಧಿಸಿದೆ ಎಂದರು.
ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರವೀಣ್ ಪತ್ನಿ ಒತ್ತಾಯಿಸಿದ್ದರು. ಆ ಪ್ರಕಾರ ಎನ್.ಐ.ಎ ಮೂಲಕ ಆರೋಪಿಗಳನ್ನು ಬಂಧಿಸಿ ಅವರನ್ನು ಜೈಲಿಗೆ ಅಟ್ಟಲಾಗಿದೆ. ನಂತರ ಪ್ರವೀಣ್ ಕುಟುಂಬದ ಕಲ್ಪನೆಯಂತೆ ಮನೆ ಕಟ್ಟಿಕೊಡಲಾಗಿದೆ. ಪತ್ನಿ ನೂತನರಿಗೆ ಉದ್ಯೋಗವನ್ನೂ ಕೂಡ ನೀಡಲಾಗಿದೆ ಎಂದರು.
ಬಳಿಕ ಆರ್‌ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಪ್ರವೀಣ್ ನೆಟ್ಟಾರು ಕನಸು ಕೇವಲ ಮನೆ ಕಟ್ಟುವುದಾಗಿರಲಿಲ್ಲ. ಅವನದ್ದು ರಾಷ್ಟ್ರ ಕಟ್ಟುವ ಕನಸಾಗಿತ್ತು. ರಾಷ್ಟ್ರ ಕಟ್ಟುವ ಕನಸಿಗೋಸ್ಕರ ತನ್ನ ಬಲಿದಾನವನ್ನೇ ಮಾಡಿದ್ದಾನೆ. ದೇಶವನ್ನು ಕಬಳಿಸುವ ಪ್ರಯತ್ನ ಭಯೋತ್ಪಾದಕರಿಂದ ಆಗುತ್ತಿದೆ. ದೇಶದಲ್ಲಿ ಯಾವಾಗ ಕಾಂಗ್ರೆಸ್ ಅಧಿಕಾರ ಬಂತೋ ಅಂದಿನಿಂದ ಮುಸ್ಲಿಂ ತುಷ್ಠೀಕರಣ ಪ್ರಾರಂಭವಾಯಿತು ಎಂದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತೇವೆ. ಮತಾಂತರ ಕಾಯ್ದೆ ಹಿಂದೆ ಪಡೆಯುತ್ತೇವೆ ಅನ್ನುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದೇ ಇಲ್ಲ. ಮುಸ್ಲಿಂ ತುಷ್ಠೀಕರಣದ ನಡುವೆ ಪ್ರವೀಣ್ ಹತ್ಯೆ ನಡೆದಿರೋದು. ಮುಸ್ಲಿಮರಿಗೆ ರಾಜಾರೋಷವಾಗಿ ನಡೆಯಬಹುದು ಎನ್ನುವಂತಹ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಓರ್ವ ದೇಶಭಕ್ತನ ಕೊಲೆಯಾಯಿತು.
ದೇಶಭಕ್ತ ಬಂಧುಗಳು ಚುನಾವಣೆಯ ಈ ಸಂದರ್ಭದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳಬೇಕು. ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲ ನೀಡಬೇಕು. ಪ್ರವೀಣ್‌ಗೆ ಕೂಡ ಅದೇ ರೀತಿಯ ಚಿಂತನೆಯಿತ್ತು. ಬಿಜೆಪಿಯನ್ನು ಎಲ್ಲಾ ಕಡೆ ಗೆಲ್ಲಿಸಬೇಕು ಎನ್ನುವ ಆಸೆ ಪ್ರವೀಣ್ ಅವರದ್ದಾಗಿತ್ತು ಎಂದು ಹೇಳಿದರು.












Click it and Unblock the Notifications