ಮಂಗಳೂರು ರೈಲ್ವೆ ನಿಲ್ದಾಣ ವಿಶ್ವದರ್ಜೆಗೇರಲು ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ ಮೋದಿ, ಮಾಹಿತಿ
ಮಂಗಳೂರು, ಆಗಸ್ಟ್, 03: ಪ್ರಧಾನಿ ನರೆಂದ್ರ ಮೋದಿಯವರು ಆಗಸ್ಟ್ 6ರಂದು ಒಟ್ಟು 20,000 ಕೋಟಿ ವೆಚ್ಚದಲ್ಲಿ ದೇಶಾದ್ಯಂತ 500 ರೈಲ್ವೇ ನಿಲ್ದಾಣಗಳ ಮರು ಅಭಿವೃದ್ಧಿ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಏಕ ಕಾಲದಲ್ಲಿ ಚಾಲನೆ ನೀಡುವ ಸಾಧ್ಯತೆಯಿದೆ. ಅಲ್ಲದೆ ಅಂದೇ ಕರಾವಳಿ ಜನರ ಬಹುದಿನಗಳ ಬೇಡಿಕೆಯೊಂದನ್ನು ಪ್ರಧಾನಿ ಅವರು ಈಡೇರಿಸಲಿದ್ದಾರೆ.
ಅಮೃತ್ ಭಾರತ್ ಯೋಜನೆಯಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ರೈಲು ನಿಲ್ದಾಣವಾಗಿ ಮಾಡಲು ಭಾರತೀಯ ರೈಲ್ವೆ ಮುಂದಾಗಿದೆ. ಇದಕ್ಕೆ ಆಗಸ್ಟ್ 6ರಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೃಷ್ಣವ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಸುಮಾರು 19.32 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದರ್ಜೆಯ ಮಟ್ಟದ ನಿಲ್ದಾಣವಾಗಿ ನಿರ್ಮಾಣ ಆಗಲಿದೆ.
2023-24ನೇ ಸಾಲಿನ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಸಹಿತ ಮಂಗಳೂರು ಸೆಂಟ್ರಲ್ ನಿಲ್ದಾಣ, ಬಂಟ್ವಾಳ ಹಾಗೂ ಸುಬ್ರಹ್ಮಣ್ಯ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಘೋಷಣೆ ಮಾಡಲಾಗುತ್ತು. ಅದರಂತೆಯೇ ಇದೀಗ ಇದಕ್ಕೆ ಮುಹೂರ್ತ ಒದಗಿಬಂದಂತಾಗಿದೆ.












Click it and Unblock the Notifications