ಕೊಲೆ ಮಾಡಿ ಅಡುಗೆ ಎಣ್ಣೆ ದೋಚಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
ಮಂಗಳೂರು, ಸಪ್ಟೆಂಬರ್ 18: ಮಂಗಳೂರಿನಿಂದ ಅಡುಗೆ ಎಣ್ಣೆ ಸಾಗಿಸುವ ಕಾರ್ಗೋ ವಾಹನದ ಡ್ರೈವರ್ ಅನಿಲ್ ಕೊಲೆ ಪ್ರಕರಣ ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಎಣ್ಣೆ ಕೊಂಡೊಯ್ಯುತ್ತಿದ್ದ ಚಾಲಕ ಅನಿಲ್ ನಾಪತ್ತೆಯಾಗಿದ್ದ. ಈ ನಾಪತ್ತೆ ಪ್ರಕರಣದ ಬಗ್ಗೆ ನಾನಾ ಊಹಾಪೋಹಗಳು ಹಬ್ಬಿದ್ದವು. ಆತನ ಶವ ಬೆಂಗಳೂರು ಹೊರವಲಯದ ಕುಂಬಳಗೋಡು ಎಂಬಲ್ಲಿ ಪತ್ತೆಯಾಗಿತ್ತು.

ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಮಂಗಳೂರು ಪೊಲೀಸರು ಪ್ರಕರಣ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನುರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಪನಹಳ್ಳಿ ನಿವಾಸಿ ಅಸಾದುಲ್ಲಾ ಷರೀಪ್ (50) ಎಂದು ಗುರುತಿಸಲಾಗಿದೆ.
ಕಳೆದ ಆಗಸ್ಟ್ 28 ರಂದು ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿರುವ ರುಚಿ, ಸೋಯ ಇಂಡಸ್ಟ್ರೀಯಿಂದ 7.50 ಲಕ್ಷ ರೂಪಾಯಿ ಮೌಲ್ಯದ 1050 ಲೀಟರ್ ತಾಳೆ ಎಣ್ಣೆಯನ್ನು ಚಾಲಕ ಅನೀಲ್ ಕುಮಾರ್ ಇವರೊಂದಿಗೆ ಸುಗಮ ಕಂಪನಿಯ ಲಾರಿಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟದನ್ನು ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸದೇ ಮೋಸ ಮಾಡಿರುವ ಬಗ್ಗೆ ಶಿವಗಣೇಶ್ ಟ್ರಾನ್ಸ್ ಪೋರ್ಟ್ ಮಾಲೀಕರು ಆಗಸ್ಟ್ 30 ಪಣಂಬೂರು ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದ್ದ ಪಣಂಬೂರು ಠಾಣೆಯ ಪೊಲೀಸರು ಆರೋಪಿ ಅಸಾದುಲ್ಲಾ ಷರೀಫ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಸಹಚರರೊಂದಿಗೆ ಸೇರಿಕೊಂಡು ಅನಿಲ್ ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿ ಅನಿಲ್ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಮಾಲನ್ನು ದೋಚಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications